ಝೀನತ್ ಬಕ್ಷ್ ಜುಮ್ಮಾ ಮಸೀದಿಯಲ್ಲಿ ಜೂ.8ರಿಂದ ನಮಾಝ್ ಆರಂಭ

Update: 2020-06-06 17:57 GMT

ಮಂಗಳೂರು, ಜೂ.6: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಮಾಝ್ ನಿರ್ವಹಿಸುವುದನ್ನು ನಿರ್ಬಂಧಿಸಿದ್ದ ರಾಜ್ಯ ಸರಕಾರವು ಇದೀಗ ನಮಾಝ್‌ಗೆ ಅನುಮತಿ ನೀಡಿದ್ದು, ಅದರಂತೆ ಜೂ.8ರ ಮುಂಜಾನೆಯಿಂದ ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಯ ಜಮಾಅತ್ ಖಾನಾದಲ್ಲಿ ನಮಾಝ್ ಆರಂಭವಾಗಲಿದೆ.

ರಾಜ್ಯ ಸರಕಾರ ಮತ್ತು ವಕ್ಫ್ ಮಂಡಳಿಯ ಮಾರ್ಗಸೂಚಿಯಂತೆ ನಮಾಝ್ ನಿರ್ವಹಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್ ಅವರ ಮಾರ್ಗದರ್ಶನದಂತೆ ಮಸೀದಿಯಲ್ಲಿ ನಮಾಝ್ ಮಾಡಲು ಎಲ್ಲ ಸಿದ್ಧತೆಗಳನ್ನು  ಕೈಗೊಳ್ಳಲಾಗಿದೆ. ಜೂ.8ರಂದು ಸುಬಹ್ ನಮಾಝ್ ನಿರ್ವಹಿಸಲು ಝೀನತ್ ಭಕ್ಷ್ ಮಸೀದಿಯ ಆಡಳಿತ ಸಮಿತಿ ನಿರ್ಧರಿಸಿದೆ.

ಕೇಂದ್ರ ಮಸೀದಿಯ ಜಮಾಅತ್ ಖಾನದಲ್ಲಿ ಸುಮಾರು 108 ಮಂದಿಗೆ ಸುರಕ್ಷಿತ ಅಂತರದೊಂದಿಗೆ ನಮಾಝ್ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಇದರೊಂದಿಗೆ ಕೊರೋನ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಸ್ಯಾನಿಟೈಝರ್, ಸೋಪಿನ ವ್ಯವಸ್ಥೆ ಕಲ್ಪಿಸಲಾಗಿದೆ. ನಮಾಝ್  ಮಾಡಲು ಬರುವವರು ಮನೆಯಲ್ಲಿಯೇ ಕಡ್ಡಾಯವಾಗಿ ವುಝೂ ಮಾಡಿ ಬರಬೇಕು. ಜೊತೆಗೆ ಮುಸಲ್ಲವನ್ನೂ ತರಬೇಕು ಎಂದು ಆಡಳಿತ ಸಮಿತಿ ಸೂಚಿಸಿದೆ. 

ಶುಕ್ರವಾರದ ಜುಮ್ಮಾ ನಮಾಝ್‌ ಮಾಡಲು ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಝೀನತ್ ಭಕ್ಷ್ ಮಸೀದಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News