ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವೃದ್ಧ ರೋಗಿಯ ಕೈ-ಕಾಲನ್ನು ಕಟ್ಟಿಹಾಕಿದ ಖಾಸಗಿ ಆಸ್ಪತ್ರೆ: ಆರೋಪ

Update: 2020-06-07 07:21 GMT

ಭೋಪಾಲ್,ಜೂ.7:   ಚಿಕಿತ್ಸೆಯ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಯವರು ವೃದ್ದರೊಬ್ಬರ ಕೈ-ಕಾಲನ್ನು ಆಸ್ಪತ್ರೆಯ ಬೆಡ್‌ಗೆ ಕಟ್ಟಿಹಾಕಿದ್ದಾರೆ ಎನ್ನಲಾದ ಅತ್ಯಂತ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವಿಚಾರದತ್ತ ಗಮನಹರಿಸಿದ್ದು, ಶಾಜಾಪುರ ಮೂಲದ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತು ತನಿಖೆ ನಡೆಸುವಂತೆ ಜಿಲ್ಲಾಸ್ಪತ್ರೆಗೆ ಆದೇಶಿಸಿದ್ದಾರೆ.

"ಆಸ್ಪತ್ರೆಯ ಬಿಲ್ 11,000 ರೂ. ಕಟ್ಟಲು ವಿಫಲವಾಗಿದ್ದಕ್ಕೆ ಆಸ್ಪತ್ರೆಯ ಆಡಳಿತ ವರ್ಗ ರೋಗಿಯ ಕೈ ಹಾಗೂ ಕಾಲನ್ನು ಆಸ್ಪತ್ರೆಯ ಬೆಡ್‌ಗೆ ಕಟ್ಟಿಹಾಕಿದೆೆ'' ಎಂದು ವೃದ್ಧ ರೋಗಿಯ ಕುಟುಂಬದವರು ಆರೋಪಿಸಿದ್ದಾರೆ.

"ನಾವು ತಂದೆಯನ್ನು ಆಸ್ಪತ್ರೆಗೆ ದಾಖಲಿಸುವಾಗ 5,000 ರೂ. ಕಟ್ಟಿದ್ದೆವು. ಆಸ್ಪತ್ರೆಯವರು ಹಲವು ದಿನಗಳ ಕಾಲ ಚಿಕಿತ್ಸೆ ಮುಂದುವರಿಸಿದ ಕಾರಣ ನಮಗೆ ಬಿಲ್ ಪಾವತಿಸಲು ಸಾಧ್ಯವಾಗಲಿಲ್ಲ''ಎಂದು ವೃದ್ಧ ರೋಗಿಯ ಮಗಳು ಹೇಳಿದ್ದಾರೆ.

ರೋಗಿಗೆ ಕೈಕಾಲು ಸೆಳೆತವಿತ್ತು. ಅವರು ಸ್ವತಃ ನೋವುಮಾಡಿಕೊಳ್ಳಬಾರದೆಂಬ ಕಾರಣಕ್ಕೆ ಕೈಕಾಲು ಕಟ್ಟಿಹಾಕಿದ್ದೇವೆ. ಮಾನವೀಯತೆಯ ನೆಲೆಯಲ್ಲಿ ಆಸ್ಪತ್ರೆಯ ಬಿಲ್ ಮನ್ನಾ ಮಾಡಲು ನಾವು ಸಿದ್ಧವಿದ್ದೇವೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News