ಉಡುಪಿ: ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ

Update: 2020-06-07 08:42 GMT

ಉಡುಪಿ ಜೂ.7: ಉಡುಪಿ ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸುವ ನಾಗರಿಕರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಪತ್ತೆಹಚ್ಚಲು, ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲು, ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ಲೈಯಿಂಗ್ ಸ್ಕ್ವಾಡ್ ತಂಡವನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ರಚಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳು, ನೀತಿ ಸಂಹಿತೆ ಉಲ್ಲಂಘನೆ ಮಾಹಿತಿಬಂದಲ್ಲಿ ತಕ್ಷಣವೇ ಸ್ಥಳಕ್ಕೆ ತೆರಳಿ , ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು, ಸಂಬಂಧಪಟ್ಟವರ ಪ್ರಕರಣ ದಾಖಲಿಸುತ್ತಿದ್ದ ಮಾದರಿಯಲ್ಲೇ ಸ್ಕ್ವಾಡ್ ಕಾರ್ಯಾಚರಿಸಲಿದೆ. ಜಿಲ್ಲೆಗೆ ಹೊರರಾಜ್ಯದಿಂದ ಬಂದು, ಹೋಂ ಕ್ವಾರಂಟೈನ್ ನಲ್ಲಿದ್ದು ನಿಯಮ ಮೀರಿ ಹೊರಗಡೆ ತಿರುಗಾಡುತ್ತಿರುವವರ ಕುರಿತು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲು ಮಾಡುವುದರ ಜೊತೆಗೆ ಅವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವ ಕಾರ್ಯ ಮಾಡುವ ಈ ತಂಡದ ಅಧಿಕಾರಿಗಳು ಮಾಡಲಿದ್ದಾರೆ. ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿನ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಮನೆಯಲ್ಲಿರುವ ಕುರಿತು ಪರಿಶೀಲನೆ ಮಾಡುವುದರ ಜೊತೆಗೆ, ತಮ್ಮ ವ್ಯಾಪ್ತಿಯಲ್ಲಿನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಸಹ ಭೇಟಿ ಪರಿಶೀಲನೆ ನಡೆಸಲಾಗುವುದು.

ಉಡುಪಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಉಡುಪಿ ನಗರಸಭೆ, ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮಗಳು, ಕಾಪು ತಾಲೂಕು, ಬ್ರಹ್ಮಾವರ ತಾಲೂಕು, ಕಾರ್ಕಳ ತಾಲೂಕು, ಹೆಬ್ರಿ ತಾಲೂಕು, ಬೈಂದೂರು ಹೋಬಳಿ, ಕುಂದಾಪುರ ಹೋಬಳಿ, ವಂಡ್ಸೆ ಹೋಬಳಿ ವ್ಯಾಪ್ತಿಗೆ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಯಾವುದೇ ಕಾರಣಕ್ಕೂ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಲ್ಲದೇ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಬಗ್ಗೆ, ಕ್ವಾರಂಟೈನ್ ಮೊಬೈಲ್ ವಾಚ್ ಆ್ಯಪ್ ಮೂಲಕ, ಸಂಬಂಧಪಟ್ಟ ವ್ಯಾಪ್ತಿಯ ಪಿಡಿಒ ಮತ್ತು ಗ್ರಾಮ ಕರಣಿಕರು ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಮನೆಗೆ, ಪ್ರತಿದಿನ ಭೇಟಿ ನೀಡಿ, ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆದು ಅಪ್ ಲೋಡ್ ಮಾಡಬೇಕಿದ್ದು, ಈ ಕಾರ್ಯವು ವ್ಯವಸ್ಥಿತವಾಗಿ ನಡೆಯುತ್ತಿರುವ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News