85 ವರ್ಷದ ಅಕ್ಬರಿ ಬೇಗಂ ಹತ್ಯೆ: 6 ಆರೋಪಿಗಳ ವಿರುದ್ಧ ಆರೋಪಪಟ್ಟಿ

Update: 2020-06-07 16:50 GMT

ಹೊಸದಿಲ್ಲಿ, ಜೂ.7: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ 85 ವರ್ಷದ ಅಕ್ಬರಿ ಬೇಗಂ ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳ ವಿರುದ್ಧ ರವಿವಾರ ಆರೋಪಪಟ್ಟಿ ದಾಖಲಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದಾರೆ.

ಈಶಾನ್ಯ ದಿಲ್ಲಿಯ ಭಜನ್‌ಪುರ ಪ್ರದೇಶದಲ್ಲಿ ಫೆಬ್ರವರಿ 25ರಂದು ದಂಗೆಕೋರರ ಗುಂಪೊಂದು ಅಕ್ಬರಿ ಬೇಗಂ ಅವರ ನೆರೆಮನೆಗೆ ದಾಳಿ ಮಾಡಿತ್ತು. ಬಳಿಕ ಈ ಗುಂಪು ಅಕ್ಬರಿ ಬೇಗಂ ಮನೆಗೂ ದಾಳಿ ನಡೆಸಿ ಮನೆಗೆ ಬೆಂಕಿ ಹಚ್ಚಿತ್ತು. ಆಗ ಕುಟುಂಬದ ಇತರ ಸದಸ್ಯರು ಮನೆಯ ಟೆರೇಸ್ ಮೇಲೆ ಹತ್ತಿ ಪಾರಾಗಿದ್ದರು. ಆದರೆ ವೃದ್ಧಾಪ್ಯದ ಕಾರಣ ಬೇಗಂಗೆ ಟೆರೇಸ್‌ನ ಮೆಟ್ಟಿಲು ಹತ್ತಲು ಸಾಧ್ಯವಾಗಿರಲಿಲ್ಲ. ದಿಲ್ಲಿ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಬಂದು ಮನೆಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಿದ ಬಳಿಕ ಪರಿಶೀಲಿಸಿದಾಗ ಮನೆಯ ಎರಡನೇ ಮಹಡಿಯಲ್ಲಿ ಹಾಸಿಗೆಯಲ್ಲಿ ಅಕ್ಬರಿ ಬೇಗಂ ಮೃತದೇಹ ಪತ್ತೆಯಾಗಿತ್ತು.

ಈ ಬಗ್ಗೆ ಅವರ ಪುತ್ರ ಪೊಲೀಸ್ ದೂರು ದಾಖಲಿಸಿದ್ದರು. ಬಳಿಕ ವಿಶೇಷ ತನಿಖಾ ದಳದ ಕ್ರೈಂಬ್ರಾಂಚ್‌ಗೆ ಈ ಪ್ರಕರಣ ಹಸ್ತಾಂತರಿಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಹಿಂಸಾಚಾರದ ದೃಶ್ಯ, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ಅರುಣ್ ಕುಮಾರ್, ವರುಣ್ ಕುಮಾರ್, ವಿಶಾಲ್ ಸಿಂಗ್, ರವಿ ಕುಮಾರ್, ಪ್ರಕಾಶ್ ಚಂದ್ ಹಾಗೂ ಸೂರಜ್ ಎಂಬವರನ್ನು ಬಂಧಿಸಿ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News