×
Ad

ಗಡಿ ಬಿಕ್ಕಟ್ಟು ಶಾಂತರೀತಿಯಲ್ಲಿ ಇತ್ಯರ್ಥಕ್ಕೆ ಭಾರತ-ಚೀನಾ ಸಮ್ಮತಿ: ವಿದೇಶ ವ್ಯವಹಾರ ಇಲಾಖೆ

Update: 2020-06-07 22:52 IST

ಹೊಸದಿಲ್ಲಿ, ಜೂ.7: ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ವಿವಿಧ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಶಾಂತರೀತಿಯಲ್ಲಿ ಬಗೆಹರಿಸಿಕೊಳ್ಳಲು ಭಾರತ -ಚೀನಾ ಒಪ್ಪಿಕೊಂಡಿವೆ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಶನಿವಾರ ಭಾರತ-ಚೀನಾ ಮಧ್ಯೆ ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಭಾಗದಲ್ಲಿರುವ ಮಾಲ್ದೊ ಎಂಬಲ್ಲಿರುವ ಚೀನಾದ ಗಡಿ ಓಟ್‌ಪೋಸ್ಟ್‌ನಲ್ಲಿ ಉಭಯ ದೇಶಗಳ ಅಧಿಕಾರಿಗಳ ಮಧ್ಯೆ ಉನ್ನತಮಟ್ಟದ ಸಭೆ ನಡೆದಿದೆ. ದ್ವಿಪಕ್ಷೀಯ ಸಂಬಂಧದ ಸಮಗ್ರ ಅಭಿವೃದ್ಧಿಗೆ ಭಾರತ-ಚೀನಾ ಗಡಿಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ಸ್ಥಿತಿ ನೆಲೆಸುವ ಅಗತ್ಯವನ್ನು ಮನಗಂಡು ಮತ್ತು ನಾಯಕರ ಮಧ್ಯೆ ನಡೆದಿರುವ ಒಪ್ಪಂದವನ್ನು ಗಮನದಲ್ಲಿರಿಸಿಕೊಂಡು ಸಭೆಯು ಗುಣಾತ್ಮಕ ಮತ್ತು ಸೌಹಾರ್ದಯುತ ರೀತಿಯಲ್ಲಿ ನಡೆದಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ.

ಸಭೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಲೆಜ ಹರೀಂದರ್ ಸಿಂಗ್ ವಹಿಸಿದ್ದರೆ ಚೀನಾದ ನಿಯೋಗದ ನೇತೃತ್ವವನ್ನು ಟಿಬೆಟ್ ಮಿಲಿಟರಿ ವಿಭಾಗದ ಕಮಾಂಡರ್ ವಹಿಸಿದ್ದರು. ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 70ನೇ ವಾರ್ಷಿಕೋತ್ಸವದ ಸಂದರ್ಭ ಇದಾಗಿದ್ದು ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ ಎಂದು ಹೇಳಿಕೆ ತಿಳಿಸಿದೆ. ಲಡಾಕ್ ಮತ್ತು ಸಿಕ್ಕಿಂ ವಲಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಭಾರತದ ಸೇನೆ ದೈನಂದಿನ ಗಸ್ತು ತಿರುಗುವುದಕ್ಕೆ ಚೀನಾದ ಸೇನೆ ಅಡ್ಡಿಯಾಗುತ್ತಿದೆ ಎಂದು ಭಾರತ ಹೇಳಿದ್ದು ಭಾರತದ ಸೇನೆ ನಿಯಂತ್ರಣ ರೇಖೆ ದಾಟಿರುವುದು ಬಿಕ್ಕಟ್ಟಿಗೆ ಕಾರಣ ಎಂಬ ಚೀನಾದ ವಾದವನ್ನು ತಳ್ಳಿಹಾಕಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News