ಪಟಾಕಿ ತುಂಬಿದ್ದ ಹಣ್ಣನ್ನು ಆನೆ ಆಕಸ್ಮಿಕವಾಗಿ ತಿಂದಿರಬಹುದು: ಕೇಂದ್ರ ಪರಿಸರ ಸಚಿವಾಲಯ

Update: 2020-06-08 09:18 GMT

ಹೊಸದಿಲ್ಲಿ: ಕೇರಳದ ಪಾಲಕ್ಕಾಡ್‍ ನಲ್ಲಿ ಗರ್ಭಿಣಿ ಆನೆ ಸಾವು ಪ್ರಕರಣ ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ಬೆನ್ನಿಗೇ ಕೇಂದ್ರ ಪರಿಸರ ಸಚಿವಾಲಯ ಹೇಳಿಕೆಯೊಂದನ್ನು ನೀಡಿ ಆ ಆನೆ ಆಕಸ್ಮಿಕವಾಗಿ ಪಟಾಕಿ ತುಂಬಿದ್ದ ಹಣ್ಣನ್ನು ತಿಂದಿರಬಹುದು ಎಂದು ಹೇಳಿದೆ.

“ಆನೆ ಆಕಸ್ಮಿಕವಾಗಿ ಆ ಹಣ್ಣನ್ನು ತಿಂದಿರಬಹುದು ಎಂದು ಪ್ರಾಥಮಿಕ ತನಿಖೆಗಳು ತಿಳಿಸುತ್ತವೆ. ಸಚಿವಾಲಯ ಈ ಕುರಿತಂತೆ  ಕೇರಳ ಸರಕಾರದ ಜತೆ ಸಂಪರ್ಕದಲ್ಲಿದ್ದು, ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಯಾವುದಾದರೂ ಅಧಿಕಾರಿಯ ನಿರ್ಲಕ್ಷ್ಯದಿಂದ ಆನೆ ಸಾವನ್ನಪ್ಪಿದೆ ಎಂದಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ'' ಎಂದು ಸಚಿವಾಲಯ ಹೇಳಿದೆ.

ತಮ್ಮ ತೋಟಗಳಿಗೆ ಕಾಡು ಹಂದಿಗಳು ನುಗ್ಗುವುದನ್ನು ತಡೆಯಲು ಸ್ಥಳೀಯರು ಅಕ್ರಮವಾಗಿ ಪಟಾಕಿಗಳನ್ನು ಹಣ್ಣುಗಳಲ್ಲಿರಿಸುತ್ತಾರೆ ಎಂದೂ ತನ್ನ ಸರಣಿ ಟ್ವೀಟ್‍ನಲ್ಲಿ ತಿಳಿಸಿದ ಸಚಿವಾಲಯ ಒಬ್ಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಿದ್ದು ಈ ಅಕ್ರಮ ಹಾಗೂ ಅಮಾನವೀಯ ಕೃತ್ಯದಲ್ಲಿ ಶಾಮೀಲಾದ ಇತರರನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

ಘಟನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಹಾಗೂ ಸುಳ್ಳು ಸುದ್ದಿಗಳನ್ನು ನಂಬದಂತೆ ಕೇಂದ್ರ ಪರಿಸರ ಸಚಿವ ಬಾಬುಲ್ ಸುಪ್ರಿಯೊ ಹೇಳಿದ್ದಾರೆ. ಆದಷ್ಟು ಬೇಗ ಈ ಪ್ರಕರಣದ ತನಿಖೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಮಹಾನಿರ್ದೇಶಕ ಹಾಗೂ ವಿಶೇಷ ಕಾರ್ಯದರ್ಶಿಯ ಜತೆಗೆ ಸಚಿವಾಲಯ  ರವಿವಾರ ಸಭೆಯೊಂದನ್ನೂ ನಡೆಸಿ ತನಿಖೆಯ ಕುರಿತಂತೆ ಚರ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News