ಕೊರೋನ ಸೋಂಕಿತ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡದ ಆಸ್ಪತ್ರೆಗಳು: ಸಹಾಯಕ್ಕಾಗಿ ಮನವಿ ಮಾಡಿದ ಸಹೋದರಿ

Update: 2020-06-08 10:49 GMT

ಮುಂಬೈ:  ಇಲ್ಲಿನ ಘಾಟ್ಕೊಪರ್ ಪ್ರದೇಶದ ಮಹಿಳೆಯೊಬ್ಬರು ಕೋವಿಡ್-19 ಸೋಂಕಿಗೆ ಒಳಗಾಗಿರುವ ಪೊಲಿಸ್ ಸಿಬ್ಬಂದಿಯಾಗಿರುವ ತನ್ನ ಸೋದರನಿಗೆ ಆಸ್ಪತ್ರೆಯಲ್ಲಿ ಬೆಡ್ ಒದಗಿಸುವಂತೆ ಮನವಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ನನ್ನ ಸೋದರ ಕಳೆದ ಎರಡು ತಿಂಗಳುಗಳಿಂದ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ. ನಮ್ಮ ಕುಟುಂಬ ವೈದ್ಯರು ರಕ್ತ ಪರೀಕ್ಷೆ ನಡೆಸುವಂತೆ ಹೇಳಿದ್ದರು. ಆತನಿಗೆ ಟೈಫಾಯ್ಡ್ ಇತ್ತು. ಆದರೆ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು'' ಎಂದು ಹೇಳುವ ಆಕೆ, ಹಲವು ಆಸ್ಪತ್ರೆಗಳು ಆತನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಇನ್ನು ಕೆಲ ಆಸ್ಪತ್ರೆಗಳು ದುಬಾರಿ ಶುಲ್ಕದ ಬೇಡಿಕೆಯಿರಿಸಿದ್ದವು ಎಂದು ಅವರು ಆರೋಪಿಸಿದ್ದಾರೆ.

“ಕೋವಿಡ್-19 ವಾರಿಯರ್ ಆಗಿರುವ ನನ್ನ ಸೋದರನನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿವೆ'' ಎಂದು ಆಕೆ ಆರೋಪಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ಕುಟುಂಬ ಸಹಾಯವಾಣಿಯನ್ನು ಸಂಪರ್ಕಿಸಿಲ್ಲ ಎಂದು ಈ ವೀಡಿಯೋಗೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸ್ ಜಂಟಿ ಆಯುಕ್ತ ನವಲ್ ಬಜಾಜ್ ಹಾಗೂ ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದಾರೆ. ಸಿಬ್ಬಂದಿಯ ಕೋವಿಡ್-19 ವರದಿಗೆ ಕಾಯಲಾಗುತ್ತಿದ್ದುದರಿಂದ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿವೆ ಎಂದು ಶಾಸಕ ಕದಮ್ ಹೇಳಿಕೊಂಡಿದ್ದಾರೆ.

ನಂತರ ಹಿರಿಯ ಇನ್‍ಸ್ಪೆಕ್ಟರ್ ವಿಜಯ್ ಸಿಂಗ್ ಘಟ್ಗೆ ಹಾಗೂ ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಆ ಪೊಲೀಸ್ ಸಿಬ್ಬಂದಿಯ ಮನೆಗೆ ತೆರಳಿ ಅವರನ್ನು  ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News