×
Ad

ಉತ್ತರ ಪ್ರದೇಶ: ಸ್ಥಳೀಯಾಡಳಿತದ ಕಿರುಕುಳ ವಿರೋಧಿಸಿ ಗಂಗಾನದಿಗೆ ಇಳಿದು ಪತ್ರಕರ್ತರ ಪ್ರತಿಭಟನೆ

Update: 2020-06-08 16:26 IST

ಲಕ್ನೋ: ‘ವಿಮರ್ಶಾತ್ಮಕ ವರದಿಗಾರಿಕೆಯನ್ನು' ಸಹಿಸದೆ ಸ್ಥಳೀಯಾಡಳಿತ ಇಬ್ಬರು ಪತ್ರಕರ್ತರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಹಲವರು ಪತ್ರಕರ್ತರು ಉತ್ತರ ಪ್ರದೇಶದ ಫತೇಹ್‍ಪುರ್‍ನಲ್ಲಿ ಗಂಗಾನದಿಗೆ ಇಳಿದು ‘ಜಲ ಸತ್ಯಾಗ್ರಹ' ನಡೆಸಿದ್ದಾರೆ.

ಪತ್ರಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿ ಕಿರುಕುಳ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ವರ್ಗಾವಣೆಗೊಳಿಸಬೇಕು ಹಾಗೂ ಕಿರುಕುಳ ಪ್ರಕರಣದ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಫತೇಹ್‍ಪುರ್‍ನ ವಿಜಯಪುರ್ ಎಂಬಲ್ಲಿರುವ ಸಮುದಾಯ ಪಾಕಶಾಲೆ ಮುಚ್ಚಿದ ಕುರಿತು ತಾವು ಮಾಡಿದ ಒಂದು ಟ್ವೀಟ್‍ಗಾಗಿ ತಮ್ಮ ಮೇಲೆ ಮೇ 13ರಂದು ಎಫ್‍ಐಆರ್ ದಾಖಲಿಸಲಾಗಿದೆ ಎಂದು  57 ವರ್ಷದ ಪತ್ರಕರ್ತ ಅಜಯ್ ಭದೌರಿಯ ಹೇಳಿದ್ದಾರೆ. ನಕಲಿ ಸುದ್ದಿ ಹರಡುತ್ತಿದ್ದಾರೆಂದು ಅವರ ವಿರುದ್ಧ ಆರೋಪ ಹೊರಿಸಲಾಗಿದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಎಫ್‍ಐಆರ್ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ ಹಾಗೂ ಭದೌರಿಯಾ  ಈ ವರ್ಷ ಯಾವುದೇ ಮಾಧ್ಯಮದ ಜತೆ  ಕೆಲಸ ಮಾಡುತ್ತಿಲ್ಲ ಎಂದು ಮ್ಯಾಜಿಸ್ಟ್ರೇಟ್ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ವಾಸ್ತವವಾಗಿ ಅವರು 32 ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿದ್ದಾರೆ.

“ನಾನು ವಿಜಯಪುರ್‍ನ ಸಮುದಾಯ ಪಾಕಶಾಲೆ ಬಂದ್ ಆಗಿದೆ ಎಂದು ಬರೆದಿದ್ದೆ. ಇದಕ್ಕೆ ಸಾಕ್ಷಿಯಾಗಿ ನಾನು ನಡೆಸಿರುವ ಸಂದರ್ಶನಗಳಿವೆ. ಆದರೆ ನಾನು ಫತೇಹ್‍ಪುರ್‍ನ ಎಲ್ಲಾ ಸಮುದಾಯ ಪಾಕಶಾಲೆಗಳು ಬಂದ್ ಆಗಿವೆ ಎಂದು ಬರೆದಿದ್ದೇನೆಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ'' ಎಂದು ಭದೌರಿಯು ಹೇಳುತ್ತಾರೆ.

“ಫತೇಹ್‍ಪುರ್‍ನಲ್ಲಿರುವ ಗೋಶಾಲೆಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ, ಇದರಿಂದಾಗಿ ಗೋವುಗಳು ಸಾಯುತ್ತಿವೆ'' ಎಂಬ ಕುರಿತು ಕಳೆದ ಡಿಸೆಂಬರ್ ತಿಂಗಳಲ್ಲಿ ವರದಿ ಮಾಡಿದ್ದ ವಿವೇಕ್ ಮಿಶ್ರಾ (35) ಎಂಬ ಪತ್ರಕರ್ತನ ವಿರುದ್ಧವೂ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News