ಪಾಕಿಸ್ತಾನದ ಐಎಸ್ಐಗೆ ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿ ನೀಡುತ್ತಿದ್ದ ಇಬ್ಬರ ಬಂಧನ

Update: 2020-06-08 12:46 GMT

ಹೊಸದಿಲ್ಲಿ: ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಕದಿಯುವ ಉದ್ದೇಶದಿಂದ ಕಾರ್ಯಾಚರಿಸುತ್ತಿದ್ದ ಪಾಕಿಸ್ತಾನದ ಐಎಸ್‍ಐ ಗೂಢಚರ್ಯೆ ಜಾಲವನ್ನು ಬೇಧಿಸಿರುವ ರಾಜಸ್ಥಾನ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಲಕ್ನೋ ಮೂಲದ ಮಿಲಿಟರಿ ಗುಪ್ತಚರ ಘಟಕಗಳು ನೀಡಿದ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಬಂಧಿತರನ್ನು ರಾಜಸ್ಥಾನದ ಶ್ರೀ ಗಂಗಾನಗರ ಸಮೀಪವಿರುವ ಸೇನಾ ಶಸ್ತ್ರಾಸ್ತ್ರ ಡಿಪೋ ಉದ್ಯೋಗಿ ವಿಕಾಸ್ ಕುಮಾರ್ (29) ಹಾಗೂ  ಬಿಕಾನೇರ್ ನಲ್ಲಿರುವ ಸೇನೆಯ ಮಹಾಜನ್ ಫೀಲ್ಡ್ ಫಯರಿಂಗ್ ರೇಂಜ್ ಇದರ ಸಿವಿಲ್  ಗುತ್ತಿಗೆ ಉದ್ಯೋಗಿ ಚಿಮನ್ ಲಾಲ್ (22) ಎಂದು ಗುರುತಿಸಲಾಗಿದೆ. ಇಬ್ಬರೂ ಪಾಕ್ ಐಎಸ್‍ಐಗೆ ಗೂಢಚರ್ಯೆ ಏಜಂಟರಾಗಿದ್ದರು.

ಪಾಕಿಸ್ತಾನದ ಮುಲ್ಟಾನ್ ಎಂಬಲ್ಲಿಂದ ಮಹಿಳೆಯೊಬ್ಬಳು ಅನೊಷ್ಕಾ ಚೋಪ್ರಾ ಎಂಬ ಹೆಸರಿನ ಫೇಸ್ ಬುಕ್ ಖಾತೆಯ ಮೂಲಕ ವಿಕಾಸ್ ಕುಮಾರ್ ನನ್ನು ಸಂಪರ್ಕ ಸಾಧಿಸಿ ಆತನ ಮೂಲಕ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನ್ ಇಂಟಲಿಜೆನ್ಸ್ ಆಪರೇಟಿವ್ ಸಂಗ್ರಹಿಸುತ್ತಿತ್ತು ಎಂದು  ಲಕ್ನೋದ ಮಿಲಿಟರಿ ಗುಪ್ತಚರ ಸಂಸ್ಥೆ ಮಾಹಿತಿ ಸಂಗ್ರಹಿಸಿತ್ತು. ಆತನ  ಹಾಗೂ ಆತನ ಸೋದರನ ಬ್ಯಾಂಕ್ ಖಾತೆಗಳ ಸಹಿತ ಮೂರು ಖಾತೆಗಳಲ್ಲಿ ಆತನಿಗೆ ಹಣ ಸಂದಾಯವಾಗುತ್ತಿತ್ತು ಎಂದೂ ತಿಳಿದು ಬಂದಿತ್ತು.

ಅಂತೆಯೇ ಆತನ ಮೇಲೆ ನಿಗಾ ಇರಿಸಿ ಲಕ್ನೋ ಮಿಲಿಟರಿ ಘಟಕ ಹಾಗೂ ಉತ್ತರ ಪ್ರದೇಶ ಎಟಿಎಸ್ ಜಂಟಿಯಾಗಿ `ಡೆಸರ್ಟ್ ಚೇಸ್' ಎಂಬ ಕಾರ್ಯಾಚರಣೆ ಆರಂಭಿಸಿತ್ತು. ಅನೊಷ್ಕಾ ಎಂಬ ಫೇಸ್ ಬುಕ್ ಖಾತೆ ಹೊಂದಿದ್ದವರಿಂದ ಫ್ರೆಂಡ್ ರಿಕ್ವೆಸ್ಟ್  ಬಂದಿತ್ತು ಹಾಗೂ ಆಕೆ ತಾನು ಮುಂಬೈಯ ಸಿಎಸ್‍ಡಿ ಮುಖ್ಯ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದುದಾಗಿಯೂ ತಿಳಿಸಿದ್ದಳು. ಆಕೆಯ ವಾಟ್ಸ್ಯಾಪ್ ಸಂಖ್ಯೆ ಭಾರತದ ಸಂಖ್ಯೆಯಾಗಿತ್ತು. ಆಕೆ ತನ್ನ ಬಾಸ್ ಎಂದು ಅಮಿತ್ ಕುಮಾರ್ ಸಿಂಗ್ ಎಂಬಾತನನ್ನು ಪರಿಚಯಿಸಿದ್ದು ಅದು ಆತನ ಸುಳ್ಳು ಹೆಸರಾಗಿತ್ತು. ಆತ ಪ್ರಮುಖ ಮಾಹಿತಿ ಕಳುಹಿಸಿಕೊಡುವಂತೆ ವಿಕಾಸ್ ಮನವೊಲಿಸಿದ್ದ. ಈ ಕೆಲಸಕ್ಕಾಗಿ ವಿಕಾಸ್‍ಗೆ ಸಣ್ಣ ಸಣ್ಣ ಮೊತ್ತ ಸೇರಿ ರೂ. 75,000 ದೊರಕಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News