ಮೂರು ವರ್ಷ ಒಂದೇ ಅಂಗಿ !: ಬೆಳಗಾವಿಯ ವ್ಯಕ್ತಿಯ ವಿಶೇಷ ಶಪಥ

Update: 2020-06-08 14:29 GMT

ಕಲ್ಲಿನ ಪರ್ವತವನ್ನು ಸುತ್ತಿಗೆಯ ಸಹಾಯದಿಂದ ಒಬ್ಬಂಟಿಯಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿ ದಂತಕಥೆಯಾದ ಬಿಹಾರದ ದಶರಥ ಮಾಂಜಿ ಯಾರಿಗೆ ತಾನೇ ಗೊತ್ತಿಲ್ಲ ? ವಿಚಿತ್ರವೆನಿಸಿದರೂ ಇಲ್ಲೊಂದು ವಿನೂತನ ಕಥೆಯಿದೆ‌. ಕೇಳಿ. 

ಬೆಳಗಾವಿ ತಾಲೂಕಿನ ಹಂದಿಗನೂರು ಗ್ರಾಮ ವ್ಯಾಪ್ತಿಯ ಅವಶ್ಯಕತೆಯಾಗಿರುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಬೇಕಾದ ಜಮೀನಿನ ಮಂಜೂರಾತಿಯ ಕಥೆಯಿದು. ಇಲ್ಲಿನ ಜ್ಯೋತಿಬಾ ಮನ್ವಾಡ್ಕರ್ ಹೆಸರಿನ ನಾಗರಿಕನೊಬ್ಬ ನೀರಿನ ಟ್ಯಾಂಕ್ ನಿರ್ಮಿಸಲು ಬೇಕಾಗಿರುವ ಜಮೀನು ಮಂಜೂರಾಗುವ ತನಕ ತನ್ನ ಅಂಗಿಯನ್ನು ಬದಲಿಸುವುದಿಲ್ಲ ಎಂದು ಶಪಥ ಮಾಡಿದ್ದನಂತೆ !

ಮೂರು ವರ್ಷಗಳ ನಂತರ ಇದೀಗ ಕಂದಾಯ ಇಲಾಖೆಯು ನಿಗದಿತ ಉದ್ದೇಶಕ್ಕೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿದೆ. ಅಂಗಿ ಬದಲಿಸಿರುವ  ಜ್ಯೋತಿಬಾ ಹೊಸ ಅಂಗಿ ತೊಟ್ಟು ಹೇಗೆ ಮಿಂಚುತ್ತಿದ್ದಾನೆ ನೋಡಿ. 

ಜ್ಯೋತಿಬಾ ತೋರಿದ ಸಾರ್ವಜನಿಕ ಹಿತಾಸಕ್ತಿಯ ಕುರಿತು ಮೆಚ್ಚುಗೆಯ ಮಾತುಗಳನ್ನು ಟ್ವಿಟರಿನಲ್ಲಿ ಕರ್ನಾಟಕ ಸರ್ಕಾರದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಬರೆದಿದ್ದಾರೆ. ಜ್ಯೋತಿಬಾ ಜತೆ ನಿಂತು ಕ್ಲಿಕ್ಕಿಸಿರುವ ತಮ್ಮ ಫೋಟೋ ಕೂಡಾ ಪ್ರಕಟಿಸಿದ್ದಾರೆ. 

ಕಂದಾಯ ಇಲಾಖೆಯನ್ನು ನಂಬಿ ಇಂತಹ ಶಪಥಗೈಯುವುದು ತೀರಾ ಅಪಾಯಕಾರಿ. ಯಾಕೆಂದರೆ ಇಲ್ಲಿ ಅರ್ಜಿದಾರನ ಆಯುಷ್ಯ ಮುಗಿದರೂ ' ಪ್ರೊಸೀಜರ್' ಮುಗಿಯುವುದಿಲ್ಲ ! ಎಲ್ಲರೂ ಜ್ಯೋತಿಬಾನಂತೆ ಅದೃಷ್ಟಶಾಲಿಗಳಲ್ಲವಲ್ಲ ?

 -ರಾಜೇಂದ್ರ ಪೈ

Writer - -ರಾಜೇಂದ್ರ ಪೈ

contributor

Editor - -ರಾಜೇಂದ್ರ ಪೈ

contributor

Similar News