ಸ್ಕೂಲ್ ಫೀಸ್ ಹೆಸರಲ್ಲಿ ಖಾಸಗಿ ಶಾಲೆಗಳಿಂದ ಲೂಟಿ: ಸರಕಾರದ ಆದೇಶಕ್ಕಿಲ್ಲ ಕಿಮ್ಮತ್ತು, ಪೋಷಕರು ಕಂಗಾಲು

Update: 2020-06-09 13:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.9: ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿಯೂ ಖಾಸಗಿ ಶಾಲೆಗಳು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ದುಪ್ಪಟ್ಟು ಶುಲ್ಕ ಕಟ್ಟಿಸಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ದುಬಾರಿ ಶುಲ್ಕ ಪಾವತಿಸಲಾಗದೇ ಪೋಷಕರು ಕಂಗಾಲಾಗಿದ್ದಾರೆ.

ಕೊರೋನ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡಬಾರದು, ಹಿಂದಿನ ವರ್ಷದ ಶುಲ್ಕ ಪಡೆಯುವಂತೆ ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಖಾಸಗಿ ಶಾಲೆಗಳು ಈ ಆದೇಶವನ್ನು ಲೆಕ್ಕಿಸದೆ ಮನಸೋಇಚ್ಛೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಶೇ.20, 30, 40, 50ವರೆಗೂ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಶುಲ್ಕ ಭರಿಸುವಂತೆ ಆಗ್ರಹಿಸುತ್ತಿವೆ ಎಂಬ ದೂರುಗಳಿವೆ.

ಖಾಸಗಿ ಶಾಲೆಗಳು ಇದೀಗ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಕಟ್ಟಬೇಕು ಎಂದು ಸಂದೇಶ ಕಳುಹಿಸುತ್ತಿವೆ. ರಾಜ್ಯದ ಸುಮಾರು ಶೇ.80 ಖಾಸಗಿ ಶಾಲೆಗಳಿಂದ ಸರಕಾರದ ಆದೇಶ ಮೀರಿ ಶುಲ್ಕ ಹೆಚ್ಚಳ ಮಾಡಿದೆ ಎಂದು ಆರೋಪಿಸಲಾಗಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಸಾವಿರಾರು ರೂ. ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ನೀಡಲಾಗುತ್ತಿದೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 23 ಸಾವಿರ ಖಾಸಗಿ ಶಾಲೆಗಳಿವೆ. ಸರಕಾರದ ಅಧಿಕೃತ ಮಾಹಿತಿ ಪ್ರಕಾರ 23,502 ಖಾಸಗಿ ಶಾಲೆಗಳು ಇವೆ. ಬೆಂಗಳೂರಿನಲ್ಲಿ ಸುಮಾರು ಏಳು ಸಾವಿರ ಖಾಸಗಿ ಶಾಲೆಗಳಿವೆ. ಬಹುತೇಕ ಶಾಲೆಗಳು ವಿವಿಧ ರೂಪದಲ್ಲಿ ಮಕ್ಕಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಟ್ಯೂಷನ್ ಫೀಸ್, ಆನ್‍ಲೈನ್ ಕಂಪ್ಯೂಟರ್ ಫೀಸ್, ಬುಕ್ಸ್, ಸಮವಸ್ತ್ರ, ಲೈಬ್ರರಿ, ಗೇಮ್ ಫೀಸ್ ಎಂದು ಸಾವಿರಾರು ರೂ. ಶುಲ್ಕವನ್ನು ಹೆಚ್ಚಳ ಮಾಡಿದೆ. ಈ ಕೊರೋನ ಸಂದರ್ಭದಲ್ಲಿಯೂ ಶಾಲೆಗಳು ಮಾತ್ರ ಶುಲ್ಕ ಕಡಿತ ಮಾಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೋಷಕರ ಪರದಾಟ

ಹಲವಾರು ಖಾಸಗಿ ಶಾಲೆಗಳು ಈಗಾಗಲೇ ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಇದಕ್ಕಾಗಿ ಪೋಷಕರು ಮಕ್ಕಳಿಗೆ ಲ್ಯಾಪ್‍ಟಾಪ್ ಅಥವಾ ಮೊಬೈಲ್ ಕೊಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ, ಹಲವಾರು ಪೋಷಕರು ಕೊರೋನ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡಿದ್ದು, ಮಕ್ಕಳ ಶಾಲಾ ಶುಲ್ಕ ತುಂಬಲು ಸಾಧ್ಯವಾಗದೇ ಪರದಾಟ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿವೆ.

ಮೊಬೈಲ್ ವ್ಯಸನಿಗಾಳಾಗುತ್ತಿರುವ ಮಕ್ಕಳು

ಶಾಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದ ಮಕ್ಕಳು ಲಾಕ್‍ಡೌನ್ ಪರಿಣಾಮದಿಂದ ಮೊಬೈಲ್ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಶಾಲೆ ಇಲ್ಲದೆ ಇರುವುದರಿಂದ ಸದಾ ಮೊಬೈಲ್ ಫೋನ್‍ನಲ್ಲೆ ಕಾಲ ಕಳೆಯುತ್ತಿದ್ದ ಕಾರಣಕ್ಕೆ ಅಸಹನೆ ವ್ಯಕ್ತಪಡಿಸಿ ಚಾಕು ಎಸೆದಿದ್ದ ತಾಯಿ ಮೇಲೆ, ಮಗ ಹಲ್ಲೆ ಮಾಡಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ವರದಿಯಾಗಿದೆ.

ನಮಗೂ ಕಷ್ಟ ಆಗುತ್ತೆ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಲಸೋಲ ಮಾಡಿ ಹಣ ಕಟ್ಟುತ್ತಿದ್ದೇವೆ. ಮನೆ ಕಡೆಗೂ ಕಷ್ಟ ಆಗುತ್ತೆ. ನಾಲ್ಕನೇ ತರಗತಿಗೆ ಒಟ್ಟು 1 ಲಕ್ಷ ಶುಲ್ಕ. ಈಗಾಗಲೇ 60 ಸಾವಿರ ರೂ. ಕಟ್ಟುವಂತೆ ಮೆಸೇಜ್ ಬಂದಿತ್ತು. ನಾವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ. ತಿಂಗಳಲ್ಲಿ ಐದು ದಿನದ ಸಂಬಳ ಕಟ್ ಮಾಡಿದ್ದಾರೆ. ಫೀಸ್‍ಗೆ ಅಂತಾನೇ ವರ್ಷದಿಂದ ಸೇವ್ ಮಾಡಿಕೊಂಡು ಬಂದಿದ್ದೇವೆ. ಹಾಗಾಗಿ ಅರ್ಧ ಹಣವನ್ನು ಕಟ್ಟಿದ್ದೇವೆ. ಆನ್‍ಲೈನ್ ಕ್ಲಾಸ್ ಎಂದು ಫೀಸ್ ತೆಗೆದುಕೊಳ್ಳುತ್ತಾರೆ. ಅದರಲ್ಲಿ ವಿಷ್ಯೂಯಲ್ಸ್ ಕ್ಲಾರಿಟಿ ಇರಲ್ಲ, ನೆಟ್ವರ್ಕ್ ಇರಲ್ಲ, ಹಳ್ಳಿ ಭಾಗದ ಜನರು ಏನು ಮಾಡಬೇಕು. ಆಗಸ್ಟ್ ಗೆ ಶಾಲೆ ಆರಂಭ ಅಂದರೆ ಅರ್ಧ ವರ್ಷ ಮುಗೀತು. ಆದರೆ ಸ್ಕೂಲ್‍ನವರು ಪೂರ್ತಿ ಹಣ ತಗೆದುಕೊಳ್ಳುತ್ತಿದ್ದಾರೆ.

-ಶ್ವೇತಾ, ಪೋಷಕಿ

ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನುಬಾಹಿರವಾಗಿ ಬೋಧನಾ ಶುಲ್ಕವನ್ನು ಹೆಚ್ಚಿಸಿ, ವಿದ್ಯಾರ್ಥಿಗಳಿಂದ ವಸೂಲು ಮಾಡುತ್ತಿರುವ ದೂರುಗಳು ಬರುತ್ತಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣ ಗಮನಹರಿಸಿ ಶಿಕ್ಷಣ ಸಂಸ್ಥೆಗಳ ಲೂಟಿಯನ್ನು ನಿಲ್ಲಿಸಿ ಕ್ರಮಕೈಗೊಳ್ಳಬೇಕು. ಪ್ರಾಥಮಿಕ ಹಂತದಲ್ಲಿಯೇ ಶುರುವಾಗಿರುವ ಹಾವಳಿಯನ್ನು ಈ ಹಂತದಲ್ಲಿಯೇ ನಿಯಂತ್ರಿಸುವ ಕೆಲಸವನ್ನು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಆದ್ಯತೆ ನೀಡಿ ಮಾಡಬೇಕು.

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News