ಅನಿಲ ಸೋರಿಕೆಯಾಗುತ್ತಿದ್ದ ತೈಲಬಾವಿಯಲ್ಲಿ ಭಾರೀ ಬೆಂಕಿ: 6,000ಕ್ಕೂ ಅಧಿಕ ಜನರ ಸ್ಥಳಾಂತರ

Update: 2020-06-09 14:15 GMT
ಸಾಂದರ್ಭಿಕ ಚಿತ್ರ

ಗುವಾಹಟಿ,ಜೂ.9: ಕಳೆದ 14 ದಿನಗಳಿಂದಲೂ ಅನಿಯಂತ್ರಿತವಾಗಿ ಅನಿಲ ಸೋರಿಕೆಯಾಗುತ್ತಿದ್ದ ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯ ಬಾಘ್ಜಾನ್‌ನಲ್ಲಿ ಆಯಿಲ್ ಇಂಡಿಯಾ ಲಿ.(ಐಒಎಲ್)ಗೆ ಸೇರಿದ ತೈಲಬಾವಿಯಲ್ಲಿ ಮಂಗಳವಾರ ಭಾರೀ ಸ್ಫೋಟ ಸಂಭವಿಸಿದ್ದು, ತೈಲಬಾವಿಯು ಹೊತ್ತಿ ಉರಿಯುತ್ತಿದೆ. ಘಟನಾ ಸ್ಥಳದಿಂದ ಒಂದೂವರೆ ಕಿ.ಮೀ.ವಿಸ್ತೀರ್ಣದಲ್ಲಿಯ ಕನಿಷ್ಠ 6,000 ಜನರನ್ನು ತೆರವುಗೊಳಿಸಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಐಒಎಲ್ ಸಂತ್ರಸ್ತ ಕುಟುಂಬಗಳಿಗೆ ತಲಾ 30,000 ಪರಿಹಾರವನ್ನು ಪ್ರಕಟಿಸಿದೆ. ಈ ಅವಘಡದಿಂದಾಗಿ ಯಾವುದೇ ಹಾನಿ ಸಂಭವಿಸಿದೆಯೇ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಅಪರಾಹ್ನ ಸುಮಾರು 1:30ಕ್ಕೆ ಸ್ಫೋಟ ಸಂಭವಿಸಿದ ಬೆನ್ನಿಗೇ ಬೆಂಕಿಯ ಜ್ವಾಲೆಗಳು ಮತ್ತು ದಟ್ಟವಾದ ಹೊಗೆ ಆಗಸವನ್ನು ಆವರಿಸಿಕೊಂಡಿತ್ತು.

ಗುವಾಹಟಿಯಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ಈ ತೈಲಬಾವಿಯಲ್ಲಿ ಮೇ 27ರಿಂದಲೇ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಿದ್ದು,ಪ್ರದೇಶದಲ್ಲಿಯ ಗದ್ದೆಗಳು ಮತ್ತು ಜೀವ ವೈವಿಧ್ಯತೆಗೆ ತೀವ್ರ ಹಾನಿಯನ್ನುಂಟು ಮಾಡಿದೆ.

 ಸ್ಥಳೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಚಿತ್ರಗಳು ಗದ್ದೆಗಳಲ್ಲಿ ಘನೀಕೃತ ಅನಿಲ ನಿಂತಿರುವುದನ್ನು, ಸಮೀಪದ ದಿಬ್ರು ನದಿಯಲ್ಲಿ ಅಳಿವಿನ ಅಂಚಿನಲ್ಲಿರುವ ಗಂಗಾನದಿ ಮೂಲದ ಡಾಲ್ಫಿನ್‌ಗಳು ಮತ್ತು ಇತರ ಜಲಚರಗಳು ಸತ್ತು ತೇಲುತ್ತಿರುವುದನ್ನು ತೋರಿಸುತ್ತಿವೆ. ತೈಲಕ್ಷೇತ್ರದಿಂದ ಕೇವಲ ಮೂರು ಕಿ.ಮೀ.ಅಂತರದಲ್ಲಿರುವ ದಿಬು-ಸೈಖೋವಾ ರಾಷ್ಟ್ರೀಯ ಉದ್ಯಾನವನದಲ್ಲಿಯ ವನ್ಯಜೀವಿಗಳಿಗೂ ಅಪಾಯ ಎದುರಾಗಿದೆ ಎಂದು ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಮೀಪದ ಚಹಾ ತೋಟಗಳಲ್ಲಿಯೂ ಘನೀಕೃತ ಅನಿಲ ಶೇಖರಣೆಗೊಂಡಿದೆ.

 ತನ್ಮಧ್ಯೆ ತೈಲಬಾವಿಯಲ್ಲಿ ಅನಿಲ ಸೋರಿಕೆಯನ್ನು ನಿಲ್ಲಿಸಲು ರವಿವಾರ ಆಗಮಿಸಿದ್ದ ಸಿಂಗಾಪುರದ ಅಲರ್ಟ್ ಡಿಸಾಸ್ಟರ್ ಕಂಟ್ರೋಲ್ ಕಂಪನಿಯ ಮೂವರು ತಜ್ಞರು ಮತ್ತು ಒಐಎಲ್‌ನ ಇತರ ಉದ್ಯೋಗಿಗಳು ಸ್ಫೋಟ ಸಂಭವಿಸಿದಾಗ ಸ್ಥಳದಲ್ಲಿದ್ದರೇ ಎನ್ನುವುದು ಗೊತ್ತಾಗಿಲ್ಲ.

 ಸೋಮವಾರ ಒಐಎಲ್‌ನ ಹಿರಿಯ ಅಧಿಕಾರಿಗಳು ಈ ಮೂವರು ವಿದೇಶಿ ತಜ್ಞರಿಗೆ ಅನಿಲ ಸೋರಿಕೆ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದರು. ಪ್ರಾಥಮಿಕ ಚರ್ಚೆಗಳ ಬಳಿಕ ಅವರು ಪರಿಣಿತರ ತಂಡದೊಂದಿಗೆ ಅನಿಲ ಸೋರಿಕೆಯಾಗುತ್ತಿದ್ದ ಸ್ಥಳಕ್ಕೆ ತೆರಳಿದ್ದರು.

ತೈಲಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುವುದು ಅಪರೂಪ. 2005ರಲ್ಲಿ ದಿಬ್ರುಗಡ ಜಿಲ್ಲೆಯ ಡಿಕಾಮ್ ಎಂಬಲ್ಲಿ ಪಾಳುಬಿದ್ದಿದ್ದ ತೈಲಬಾವಿಯೊಂದರಲ್ಲಿ ಹೀಗೆಯೇ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿತ್ತು. ವಿದೇಶದಿಂದ ಆಗಮಿಸಿದ್ದ ತಜ್ಞರು 45 ದಿನಗಳ ಪರಿಶ್ರಮದ ಬಳಿಕ ಕೊನೆಗೂ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News