ಅಂಫಾನ್ ಚಂಡಮಾರುತ ಸಂದರ್ಭ ಕಾರ್ಯನಿರ್ವಹಿಸಿದ್ದ 50 ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಕೊರೋನ ಸೋಂಕು
Update: 2020-06-09 23:14 IST
ಹೊಸದಿಲ್ಲಿ, ಜೂ.9: ಅಂಫಾನ್ ಚಂಡಮಾರುತದ ಸಂದರ್ಭ ಪಶ್ಚಿಮಬಂಗಾಳದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿತರಾಗಿದ್ದ ಎನ್‌ಡಿಆರ್‌ಎಫ್‌ನ ಕನಿಷ್ಟ 50 ಸಿಬಂದಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಚಂಡಮಾರುತದ ಸಂದರ್ಭ ಪಶ್ಚಿಮ ಬಂಗಾಳದಲ್ಲಿ 170ಕ್ಕೂ ಹೆಚ್ಚು ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು ಇವರಲ್ಲಿ ಒಬ್ಬ ಸಿಬ್ಬಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಆ ತಂಡದಲ್ಲಿದ್ದ ಎಲ್ಲಾ ಸಿಬಂದಿಗಳನ್ನೂ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ ಕೆಲವರು ಕಟಕ್, ಒಡಿಶಾದಲ್ಲಿರುವ ತಮ್ಮ ಮೂಲ ಕಚೇರಿಗೆ ವಾಪಸಾಗಿದ್ದರು. ಸೋಮವಾರದವರೆಗೆ ಬಂದಿರುವ ಪರೀಕ್ಷಾ ವರದಿಯಲ್ಲಿ ಕನಿಷ್ಟ 50 ಜನರಲ್ಲಿ ಪೊಸಿಟಿವ್ ವರದಿ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಸಿಟಿವ್ ವರದಿ ಬಂದಿರುವವರನ್ನು ಆಸ್ಪತ್ರೆಯ ಪ್ರತ್ಯೇಕ ವಿಭಾಗಕ್ಕೆ ದಾಖಲಿಸಲಾಗಿದೆ. ಇನ್ನಷ್ಟು ವರದಿಗಾಗಿ ಕಾಯಲಾಗುತ್ತಿದೆ ಎಂದವರು ಹೇಳಿದ್ದಾರೆ.