ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಆಗಿ ಯೂನಿಸ್ ಖಾನ್ ನೇಮಕ

Update: 2020-06-09 18:03 GMT

ಕರಾಚಿ, ಜೂ.9: ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ದೇಶದ ಅತ್ಯಂತ ಯಶಸ್ವಿ ಟೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಯೂನಿಸ್ ಖಾನ್‌ರನ್ನು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿದೆ.

ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಮಾಜಿ ಸ್ಪಿನ್ನರ್ ಮುಷ್ತಾಕ್ ಅಹ್ಮದ್‌ರನ್ನು ತಂಡದ ಸ್ಪಿನ್ ಬೌಲಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಪಿಸಿಬಿ ಆಯ್ಕೆ ಮಾಡಿದೆ. ಸರಣಿಯ ಕುರಿತ ವಿವರಗಳನ್ನು ಶೀಘ್ರವೇ ಪ್ರಕಟಿಸಲಿದೆ.

ಮುಖ್ಯ ಕೋಚ್ ಮಿಸ್ಬಾವುಲ್ ಹಕ್ ಹಾಗೂ ವೇಗದ ಬೌಲಿಂಗ್ ಕೋಚ್ ವಕಾರ್ ಯೂನಿಸ್‌ಗೆ ತಂಡದ ಪ್ರದರ್ಶನವನ್ನು ಉತ್ತಮ ಪಡಿಸಲು ನೆರವಾಗುವಂತೆ ಈ ಆಯ್ಕೆ ಮಾಡಲಾಗಿದೆ.

ಪ್ರವಾಸ ವ್ಯವಸ್ಥೆಯ ಭಾಗವಾಗಿ ಹೆಚ್ಚುವರಿ ಆಟಗಾರರನ್ನು ಇಂಗ್ಲೆಂಡ್‌ಗೆಕಳುಹಿಸಿಕೊಡಲಾಗುತ್ತದೆ. ಆಟಗಾರರಿಗೆ ಉತ್ತಮ ತರಬೇತಿ ಹಾಗೂ ತಯಾರಿಯ ಅವಕಾಶಕ್ಕಾಗಿ ಸಮರ್ಥ ಕೋಚ್‌ಗಳು ಅತ್ಯಂತ ಮುಖ್ಯವಾಗುತ್ತದೆ.

42ರ ಹರೆಯದ ಯೂನಿಸ್ 2000ರಿಂದ 2017ರ ತನಕ 52ರ ಸರಾಸರಿಯಲ್ಲಿ 118 ಟೆಸ್ಟ್ ಪಂದ್ಯಗಳಲ್ಲಿ 10,099 ರನ್ ಗಳಿಸಿದ್ದಾರೆ. ಇದರಲ್ಲಿ 2009ರಲ್ಲಿ ಕರಾಚಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧ ಜೀವನಶ್ರೇಷ್ಠ 313 ರನ್ ಕೂಡ ಸೇರಿದೆ. ಲಂಕಾ ವಿರುದ್ಧ ತ್ರಿಶತಕ ಸಿಡಿಸಿದ್ದ ಯೂನಿಸ್ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದರು. ಇಂಗ್ಲೆಂಡ್ ವಿರುದ್ಧ ಯೂನಿಸ್ ಉತ್ತಮ ದಾಖಲೆ ಹೊಂದಿದ್ದರು. 2007ರಲ್ಲಿ ಇಂಗ್ಲೀಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಯಾರ್ಕ್‌ಶೈರ್ ಪರ 48.47ರ ಸರಾಸರಿಯಲ್ಲಿ 13 ಪಂದ್ಯಗಳಲ್ಲಿ 824 ರನ್ ಗಳಿಸಿದ್ದರು.

‘‘ನನ್ನ ಪಾಲಿಗೆ ದೇಶವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡ ಗೌರವ ಹಾಗೂ ಉತ್ತಮ ಭಾವನೆ ಎಂದಿಗೂ ಇರಲಿಲ್ಲ. ಇಂಗ್ಲೆಂಡ್‌ನ ಸವಾಲಿನ ಹಾಗೂ ರೋಮಾಂಚಕಾರಿ ಕ್ರಿಕೆಟ್ ಪ್ರವಾಸಕ್ಕಾಗಿ ನನಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ’’ಎಂದು ಯೂನಿಸ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News