ಇಡೀ ವರ್ಷದ ಸಂಪಾದನೆಯಿಂದ ಅಮೇರಿಕ ಟಿಕೆಟ್ ಕೊಡಿಸಿದ್ದರು ಸುಂದರ್ ಪಿಚೈ ತಂದೆ !

Update: 2020-06-10 14:49 GMT

ಗೂಗಲ್ ಸಿಇಒ ಸುಂದರ್ ಪಿಚೈ ಯಾರಿಗೆ ಗೊತ್ತಿಲ್ಲ ? ವಿಶ್ವದ ಮಾಹಿತಿ ತಂತ್ರಜ್ಞಾನದ ಕೀಲಿಕೈ ಆಗಿರುವ ಗೂಗಲ್ ನ ಕೀಲಿಕೈ ಈಗ ಭಾರತೀಯ ಅಮೇರಿಕನ್ ಸುಂದರ್ ಪಿಚೈ ಕೈಯಲ್ಲಿದೆ. ಆದರೆ ಆ ಸ್ಥಾನಕ್ಕೆ ತಲುಪಲು ಅವರು ಪಟ್ಟಿರುವ ಶ್ರಮ, ಅದರ ಹಿಂದಿರುವ ಅವರ ಹೆತ್ತವರ ತ್ಯಾಗ ಬಹಳ ಕಡಿಮೆ ಜನರಿಗೆ ಗೊತ್ತಿದೆ. 

ತನ್ನ ಸರಳ ಹಿನ್ನೆಲೆ ಬಗ್ಗೆ ಯೂಟ್ಯೂಬ್ ನ ಡಿಯರ್ ಕ್ಲಾಸ್ 2020 ವರ್ಚುವಲ್ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಸುಂದರ್ ಪಿಚೈ ಇಂತಹ ಹಲವು ಕುತೂಹಲಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂದುಕೊಂಡ ವಿದ್ಯಾರ್ಥಿಗಳಿಗೆ, ಯುವಜನರಿಗೆ ಸುಂದರ್ ಬದುಕಿನಲ್ಲಿ ಬಹಳ ಸುಂದರ ಪಾಠವಿದೆ. 

ಸುಂದರ್ ಬಹಳ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅಮೇರಿಕಾದ ಪ್ರತಿಷ್ಠಿತ ಸ್ಟಾನ್ಫೋರ್ಡ್ ವಿವಿಯಲ್ಲಿ ಕಲಿಯಲು ಅವರು ಹೊರಟಾಗ ಅವರ ತಂದೆ ತನ್ನ ಇಡೀ ವರ್ಷದ ಸಂಬಳವನ್ನು ಖರ್ಚು ಮಾಡಿ ಅವರಿಗೆ ಅಮೆರಿಕ ಟಿಕೆಟ್ ಕೊಡಿಸಿದ್ದರು! ಸುಂದರ್ ತಮ್ಮ ಜೀವನದ ಮೊದಲ ವಿಮಾನ ಯಾನ ಮಾಡಿದ್ದು ಅದೇ ಆಗಿತ್ತು. !

ತಾನು ಬೆಳೆದ ಬಂದ ಬಗೆ ಹಾಗು ಅದರಲ್ಲಿ ತನ್ನ ಹೆತ್ತವರ ಕೊಡುಗೆಯನ್ನು ಸದಾ ಸ್ಮರಿಸುವ ಸುಂದರ್ ಪಿಚೈ ತಂತ್ರಜ್ಞಾನದಲ್ಲಿ ತನಗಿದ್ದ ಅಪಾರ ಆಸಕ್ತಿ ಹಾಗು ಮುಕ್ತ ಮನಸ್ಸು ತನ್ನನ್ನು ಈ ಸ್ಥಾನಕ್ಕೆ ತಲುಪಿಸಿತು ಎಂದು ಹೇಳಿದ್ದಾರೆ. ನಾನು ಅಂದು ಕಾಲಿಫೋರ್ನಿಯಾ ಬಂದು ತಲುಪಿದಾಗ ಈ ಹಂತಕ್ಕೆ ಬಂದು ತಲುಪುವ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ. 

ಮೂಲತಃ ತಮಿಳುನಾಡಿನ ಮಧುರೈನವರಾದ ಸುಂದರ್ ಪಿಚೈ ಬೆಳೆದಿದ್ದು ಚೆನ್ನೈನ ಅಶೋಕ್ ನಗರದಲ್ಲಿರುವ ಎರಡು ಬೆಡ್ ರೂಮ್ ಅಪಾರ್ಟ್ ಮೆಂಟ್ ಒಂದರಲ್ಲಿ. ಅವರ ತಂದೆ ಬ್ರಿಟಿಷ್ ಕಂಪೆನಿ ಜಿಇಸಿಯಲ್ಲಿ ಇಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದರೆ ತಾಯಿ ಸ್ಟೆನೋಗ್ರಾಫರ್ ಆಗಿದ್ದರು. ಅಶೋಕ್ ನಗರದ ಜವಾಹರ್ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸುಂದರ್ ಖರಗ್ಪುರ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಸ್ಟ್ಯಾನ್ಫೋರ್ಡ್ ವಿವಿಯಲ್ಲಿ ಎಂ ಎಸ್ ಸ್ನಾತಕೋತ್ತರ ಪದವಿ ಪಡೆದರು. ಜೊತೆಗೆ ವಾರ್ಟನ್ ಸ್ಕೂಲ್ ಆಫ್ ಪೆನ್ಸಿಲ್ವೇನಿಯಾ ವಿವಿಯಲ್ಲಿ ಎಂಬಿಎ ಮಾಡಿದರು. ತಮ್ಮ ಶಾಲಾ ಕಾಲೇಜು ಅಧ್ಯಯನದಲ್ಲಿ ಸದಾ ಸುಂದರ್ ಪಿಚೈ ಅತ್ಯುತ್ತಮ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. 

ಕೊರೋನದಿಂದ ತಮ್ಮ ಶಿಕ್ಷಣ, ಭವಿಷ್ಯ ಮಸುಕಾಯಿತೆಂದು ಮರುಗುವ ವಿದ್ಯಾರ್ಥಿಗಳು ಹಾಗು ಅವರ ಹೆತ್ತವರಿಗೆ ಕಿವಿ ಮಾತು ಹೇಳಿರುವ ಸುಂದರ್ 1920 ರಲ್ಲಿ ಸ್ಪ್ಯಾನಿಷ್ ಫ್ಲೂ ಬಂದಿದ್ದಾಗ, ವಿಯೆಟ್ನಾಂ ಯುದ್ಧ ನಡೆದಿದ್ದಾಗ ಹೇಗೆ ಅಂದಿನ ವಿದ್ಯಾರ್ಥಿಗಳು ಧೃತಿಗೆಡದೆ ಮುಂದೆ ಹೆಜ್ಜೆ ಇಟ್ಟಿದ್ದರು, ಅದೇ ರೀತಿ ಈಗಿನ ವಿದ್ಯಾರ್ಥಿಗಳೂ ತಮ್ಮ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.  

ಯೂಟ್ಯೂಬ್ ನ ಡಿಯರ್ ಕ್ಲಾಸ್  2020 ವರ್ಚುವಲ್ ಪದವಿ ಪ್ರದಾನ ಕಾರ್ಯಕ್ರಮದಲ್ಲಿ  ಬರಾಕ್ ಒಬಾಮ, ಮಿಚೆಲ್ ಒಬಾಮ, ಬಿಯೊನ್ಸ್, ಲೇಡಿ ಗಾಗಾ, ಮಲಾಲಾ ಯೂಸುಫ್ ಝಯ್ ಮತ್ತಿತರರು ಭಾಗವಹಿಸಿದ್ದರು.   

2004 ರಲ್ಲಿ ಗೂಗಲ್ ಸೇರಿದ ಸುಂದರ್ ಪಿಚೈ ಹಂತಹಂತವಾಗಿ ಮೇಲೇರಿ 2015 ರಲ್ಲಿ ಕಂಪೆನಿಯ ಅತ್ಯುನ್ನತ ಸ್ಥಾನವಾದ ಸಿಇಒ ಹುದ್ದೆ ಪಡೆದಿದ್ದಾರೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News