×
Ad

ಲಡಾಖ್‌ನ 3 ಸ್ಥಳಗಳಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ಭಾರತ-ಚೀನಾ

Update: 2020-06-10 20:46 IST

ಹೊಸದಿಲ್ಲಿ, ಜೂ.10: ಭಾರತ ಮತ್ತು ಚೀನಾದ ಪಡೆಗಳು ಪೂರ್ವ ಲಡಾಖ್‌ನ ಮೂರು ಪ್ರದೇಶಗಳಿಂದ ಹಿಂದಕ್ಕೆ ಸರಿದಿದ್ದರೂ, ಚೀನಾದ ಪಡೆಯು ವಾಸ್ತವಿಕ ನಿಯಂತ್ರಣ ರೇಖೆಯ ಭಾರತದ ಭೂಪ್ರದೇಶದ ಬಳಿ ನಿಯೋಜಿಸಿರುವ ಬೃಹತ್ ಸೇನಾ ಜಮಾವಣೆಯನ್ನು ಹಿಂಪಡೆದರೆ ಮಾತ್ರ ಗಡಿಭಾಗದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಭಾರತ ಹೇಳಿದೆ.

ಉಭಯ ಪಡೆಗಳ ಸೇನಾಧಿಕಾರಿಗಳ ಮಧ್ಯೆ ಜೂನ್ 6ರಂದು ನಡೆದ ಸಭೆಯ ಬಳಿಕ ಪೂರ್ವ ಲಡಾಖ್ ಕ್ಷೇತ್ರದ ಗಾಲ್ವನ್ ಕಣಿವೆ ಪ್ರದೇಶ( ಗಸ್ತು ಬಿಂದು 14), ಗಸ್ತು ಬಿಂದು 15 ಹಾಗೂ ಹಾಟ್‌ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ವಾಸ್ತವಿಕ ನಿಯಂತ್ರಣ ರೇಖೆಯಿಂದ ಉಭಯ ಪಡೆಗಳೂ ಸುಮಾರು 2.5 ಕಿ.ಮೀನಷ್ಟು ಹಿಂದೆ ಸರಿದಿದೆ. ಇದು ಉತ್ತಮ ಬೆಳವಣಿಗೆ. ಆದರೆ ಲಡಾಕ್ ಕ್ಷೇತ್ರದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ತನ್ನ ಭೂಭಾಗದಲ್ಲಿ ಚೀನಾದ ಪಡೆಯು ಫಿರಂಗಿ ದಳ, ಟ್ಯಾಂಕ್ ದಳ, ಪದಾತಿ ದಳ ವಾಹನ ಸಹಿತ 10,000ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಇದಕ್ಕೆ ಉತ್ತರವಾಗಿ ಭಾರತದ ಸೇನೆಯೂ 10,000ಕ್ಕೂ ಅಧಿಕ ಯೋಧರನ್ನು ನಿಯೋಜಿಸಿದೆ. ಈ ಪಡೆಗಳನ್ನು ಹಿಂಪಡೆದರೆ ಮಾತ್ರ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ನೆಲೆಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ 10 ದಿನಗಳಲ್ಲಿ ಉಭಯ ಪಡೆಗಳ ಮಧ್ಯೆ ಬಟಾಲಿಯನ್ ಮಟ್ಟ, ಬ್ರಿಗೇಡ್ ಮಟ್ಟ, ಮೇಜರ್ ಜನರಲ್ ಮಟ್ಟದ ಸಭೆ ಸಹಿತ ಹಲವು ಸಭೆಗಳು ನಡೆಯಲಿದ್ದು ಸಭೆಯಲ್ಲಿ ಈ ವಿಷಯವನ್ನು ಎತ್ತಲಾಗುವುದು ಎಂದು ಭಾರತ ಹೇಳಿದೆ. ಚೀನಾವು ವಾಸ್ತವಿಕ ನಿಯಂತ್ರಣ ರೇಖೆಯ ಬಳಿಯ ಹೊಟನ್ ಮತ್ತು ಗಾರ್ ಗುನ್ಸಾ ವಾಯುನೆಲೆಯಲ್ಲಿ ಯುದ್ಧ ವಿಮಾನ, ಬಾಂಬರ್ ವಿಮಾನಗಳನ್ನು ನಿಯೋಜಿಸಿದ್ದು, ಇಲ್ಲಿ ಸಾಮಾನ್ಯವಾಗಿ ಇಷ್ಟೊಂದು ಪ್ರಮಾಣದ ಸೇನೆಯನ್ನು ಚೀನಾ ನಿಯೋಜಿಸುವುದಿಲ್ಲ ಎಂದೂ ಭಾರತದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News