ಉತ್ತರ ಪ್ರದೇಶ: ಗೋಹತ್ಯೆಗೆ ಕಠಿಣ ಶಿಕ್ಷೆ ಆಧ್ಯಾದೇಶಕ್ಕೆ ಸಚಿವ ಸಂಪುಟದ ಒಪ್ಪಿಗೆ

Update: 2020-06-10 17:36 GMT

ಲಕ್ನೋ, ಜೂ.10: ಗೋಹತ್ಯೆ ನಡೆಸಿದವರಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಆಧ್ಯಾದೇಶಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಉತ್ತರಪ್ರದೇಶ ಸಂಪುಟ ಗೋಹತ್ಯೆ ತಡೆ(ತಿದ್ದುಪಡಿ) ಆಧ್ಯಾದೇಶ 2020ರ ಪ್ರಕಾರ ಗೋ ಹತ್ಯೆ ನಡೆಸಿದವರಿಗೆ ಹತ್ತು ವರ್ಷದವರೆಗೆ ಜೈಲುಶಿಕ್ಷೆ ಹಾಗೂ 5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಆಧ್ಯಾದೇಶದ ಪ್ರಕಾರ, ಮೊದಲ ಬಾರಿ ಅಪರಾಧ ಎಸಗಿದವರಿಗೆ 7ವರ್ಷ ಜೈಲುಶಿಕ್ಷೆ ಹಾಗೂ 3 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಎರಡನೇ ಬಾರಿಯ ಅಪರಾಧಕ್ಕೆ 10 ವರ್ಷದ ವರೆಗೆ ಜೈಲುಶಿಕ್ಷೆ ಹಾಗೂ 5 ಲಕ್ಷದವರೆಗೆ ದಂಡ ವಿಧಿಸಬಹುದು.

 ಈಗ ಗರಿಷ್ಟ ದಂಡ 10,000 ರೂ. ಆಗಿದೆ. ಹಸುಗಳು ಹಾಗೂ ಇತರ ಪಶುಗಳ ಅಕ್ರಮ ಸಾಗಣೆ ಪ್ರಕರಣದಲ್ಲಿ ವಾಹನ ಚಾಲಕ, ವಾಹನದ ನಿರ್ವಾಹಕ ಹಾಗೂ ಮಾಲಕರ ವಿರುದ್ಧ ದೂರು ದಾಖಲಿಸಲಾಗುವುದು. ವಾಹನ ಮಾಲಕರ ಅರಿವಿಗೆ ಬಾರದಂತೆ ಪಶುಗಳನ್ನು ವಾಹನದಲ್ಲಿ ಸಾಗಿಸಿರುವುದನ್ನು ದೃಢಪಡಿಸಿದರೆ ಆಗ ದೂರನ್ನು ರದ್ದುಪಡಿಸಲಾಗುವುದು. ವಶಪಡಿಸಿಕೊಂಡ ಪಶುಗಳ ನಿರ್ವಹಣಾ ವೆಚ್ಚವನ್ನು 1 ವರ್ಷದವರೆಗೆ ಅಥವಾ ಪಶುಗಳನ್ನು ಬಿಡುಗಡೆಗೊಳಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ವಾಹನದ ಮಾಲಕರು ಭರಿಸಬೇಕು.

ಹಸುವಿನ ಜೀವಕ್ಕೆ ಅಪಾಯವುಂಟು ಮಾಡುವ ಉದ್ದೇಶದಿಂದ ಹಸುವಿಗೆ ಆಹಾರ ಮತ್ತು ನೀರು ಒದಗಿಸದ ವ್ಯಕ್ತಿಗಳಿಗೆ 1 ವರ್ಷದ ಕಠಿಣ ಜೈಲುಶಿಕ್ಷೆ(7 ವರ್ಷಕ್ಕೆ ವಿಸ್ತರಿಸಬಹುದು) ಮತ್ತು 1 ಲಕ್ಷ ರೂ. ದಂಡ(3 ಲಕ್ಷಕ್ಕೆ ವಿಸ್ತರಿಸಬಹುದು) ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News