ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ: ಎರಡನೇ ಬಾರಿ ಮುಂಬೈ ಪೊಲೀಸರಿಂದ ಅರ್ನಬ್ ಗೋಸ್ವಾಮಿ ವಿಚಾರಣೆ

Update: 2020-06-10 19:24 GMT

ಮುಂಬೈ: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಬಂಧ ಜೂನ್ 10ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಬಾಂಬೈ ಹೈಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಅವರಿಂದು ಮುಂಬೈನ ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು.

ಪೈದೋನಿ ಪೊಲೀಸ್ ಠಾಣೆ ಅಧಿಕಾರಿಗಳು ಮಂಗಳವಾರ ಸಮನ್ಸ್‌ ನೀಡಿದ್ದ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿ ಬುಧವಾರ ಮಧ್ಯಾಹ್ನ 2: 15 ರ ಸುಮಾರಿಗೆ ಠಾಣೆಗೆ ಹಾಜರಾಗಿದ್ದಾರೆ ಎಂದು ಮುಂಬೈ ಪೊಲೀಸ್ ಉಪ ಆಯುಕ್ತ ಪ್ರಣಯ ಅಶೋಕ್ ತಿಳಿಸಿದ್ದಾರೆ.
ಸಂಜೆ 6.45ಕ್ಕೆ ಅರ್ನಬ್ ಅವರು ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಯಿಂದ ತೆರಳಿದ್ದಾರೆ.
 
ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಮೊದಲು ಅವರನ್ನು ಪೈದೋನಿ ಪೊಲೀಸ್ ಠಾಣೆ ಅಧಿಕಾರಿಗಳು ವಿಚಾರಣೆ ನಡೆಸಿದರು. ಬಳಿಕ ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಯಲ್ಲೇ ದಾಖಲಾದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆ ಅಧಿಕಾರಿಗಳು ಅವರ ವಿಚಾರಣೆ ನಡೆಸಿದರು ಎಂದು ತಿಳಿದು ಬಂದಿದೆ.

ವಲಸೆ ಕಾರ್ಮಿಕರು ಬಾಂದ್ರಾದಲ್ಲಿ ಎ. 14ರಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಬಗ್ಗೆ ಹಾಗೂ ಪಲ್ಘಾರ್ ಹತ್ಯೆ ಪ್ರಕರಣದ ಸಂಬಂಧ ಅರ್ನಬ್ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News