ಆದಿತ್ಯನಾಥ್ 'ಬೆದರಿಕೆ'ಗೆ ನೇಪಾಳ ಪ್ರಧಾನಿ ಟೀಕೆ

Update: 2020-06-11 03:54 GMT

ನೇಪಾಳ, ಜೂ.11: ಗಡಿವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬೆದರಿಕೆ ಹಾಕಿರುವುದನ್ನು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಕಟುವಾಗಿ ಟೀಕಿಸಿದ್ದಾರೆ. ಈ ರೀತಿಯ ಬೆದರಿಕೆ ಹಾಕದಂತೆ ಅವರು ಆದಿತ್ಯನಾಥ್ ಗೆ ಸಲಹೆ ಮಾಡಿದ್ದಾರೆ.

ಇದರೊಂದಿಗೆ ಭಾರತ ಹಾಗೂ ನೇಪಾಳ ನಡುವಿನ ಗಡಿವಿವಾದ ಹೊಸ ತಿರುವು ಪಡೆದುಕೊಂಡಿದೆ. ಟಿಬೆಟ್ ಗಡಿಗೆ ಹೊಂದಿಕೊಂಡಂತೆ 80 ಕಿಲೋಮೀಟರ್ ಲಿಂಪುಲೇಕ್ ಪ್ರದೇಶಕ್ಕೆ 80 ಕಿಲೋಮಿಟರ್ ಉದ್ದದ ರಸ್ತೆ ನಿರ್ಮಾಣ ವಿರುದ್ಧ ಕಠ್ಮಂಡು ಪ್ರತಿಭಟನೆ ನಡೆಸುವುದರೊಂದಿಗೆ ವಿವಾದ ಭುಗಿಲೆದ್ದಿತ್ತು. ಲಿಂಪುಲೇಕ್ ಪ್ರದೇಶದ ಮೇಲೆ ನೇಪಾಳ ಹಕ್ಕು ಪ್ರತಿಪಾದಿಸಿದೆ. ಈ ಪ್ರದೇಶವನ್ನು ತನ್ನ ಭೂಪ್ರದೇಶದೊಳಗೆ ಸೇರಿಸಿಕೊಂಡ ಹೊಸ ನಕ್ಷೆಯನ್ನು ಓಲಿ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈ ಸಂಬಂಧ ನೇಪಾಳ ಸರ್ಕಾರ ಮಂಡಿಸಿದ ಸಂವಿಧಾನ ತಿದ್ದುಪಡಿಗೆ ಸದನ ಅವಿರೋಧ ಒಪ್ಪಿಗೆ ನೀಡಿತ್ತು.

ಈ ಸಂಬಂಧ ಪ್ರತಿನಿಧಿ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಓಲಿ, ನೇಪಾಳಕ್ಕೆ ಬೆದರಿಕೆ ಹಾಕದಂತೆ ಭಾರತದ ಕೇಂದ್ರ ನಾಯಕತ್ವ ಆದಿತ್ಯನಾಥ್‌ಗೆ ಸಲಹೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ನೇಪಾಳದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದು ಅಸಮರ್ಪಕ ಹಾಗೂ ಕಾನೂನುಬಾಹಿರ. ಭಾರತದ ಕೇಂದ್ರ ನಾಯಕತ್ವ, ನೀವು ಹೊಣೆಗಾರರಲ್ಲದ ವಿಷಯದ ಬಗ್ಗೆ ಮಾತನಾಡದಂತೆ ಆದಿತ್ಯನಾಥ್ ರಿಗೆ ಸಲಹೆ ಮಾಡಬೇಕು ಎಂದರು. ಆದಿತ್ಯನಾಥ್ ಹೇಳಿಕೆಯನ್ನು ನೇಪಾಳ ಖಂಡಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಲಿಂಪುಲೇಕ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ನೇಪಾಳದ ಭೂಭಾಗ. 1960ರಿಂದಲೂ ನೇಪಾಳಕ್ಕೆ ಸೇರಿದ ಭಾಗದಲ್ಲಿ ತನ್ನ ಸಶಸ್ತ್ರ ಪಡೆಗಳನ್ನು ಭಾರತ ನಿಯೋಜಿಸಿತ್ತು ಎಂದು ಅವರು ಹೇಳಿದ್ದಾರೆ.

''ನೇಪಾಳ ಟಿಬೆಟ್ ಮಾಡಿದ ಪ್ರಮಾದ ಮಾಡಬಾರದು; ಪರಿಣಾಮದ ಬಗ್ಗೆ ಯೋಚಿಸಿ, ಟಿಬೆಟ್‌ಗೆ ಏನಾಯಿತು ಎನ್ನುವುದನ್ನು ನೆನಪಿಸಿಕೊಳ್ಳಲಿ'' ಎಂದು ಆದಿತ್ಯನಾಥ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News