×
Ad

ಹೊಟ್ಟೆ ತುಂಬಿಸಿಕೊಳ್ಳಲು ಚಿನ್ನ ಮಾರಾಟಕ್ಕಿಟ್ಟ ವಲಸೆ ಕಾರ್ಮಿಕ ಕುಟುಂಬ!

Update: 2020-06-11 11:50 IST

 ಕನೌಜ್(ಉತ್ತರಪ್ರದೇಶ), ಜೂ.11: ಕಳೆದ ತಿಂಗಳು ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ವಾಪಸಾಗಿರುವ ವಲಸೆ ಕಾರ್ಮಿಕರ ಕುಟುಂಬ ಆಹಾರ ಹಾಗೂ ಔಷಧಿಗಳ ಖರೀದಿಗಾಗಿ ತಮ್ಮಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಮಾರಾಟ ಮಾಡಿರುವ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳು ಈ ವಿಚಾರ ಹೆಚ್ಚು ಬಿಂಬಿಸಿದಾಗ ಎಚ್ಚೆತ್ತುಕೊಡಿರುವ ಜಿಲ್ಲಾಡಳಿತ ಕಾರ್ಮಿಕ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದೆ.

ವಲಸೆ ಕಾರ್ಮಿಕನೊಬ್ಬ ಖರ್ಚಿಗೆ ಕಾಸಿಲ್ಲದೆ ಕಂಗಾಲಾಗಿ ತನ್ನ ಪತ್ನಿಯ ಒಡೆವೆಯನ್ನು ಕನೌಜ್‌ನ ಸ್ಥಳೀಯ ಮಾರುಕಟ್ಟೆಯಲ್ಲಿ 1,500 ರೂ.ಗೆ ಮಾರಾಟ ಮಾಡಿ ತನಗೆ ಬೇಕಾದ ಆಹಾರ ಹಾಗೂ ಔಷಧಿಯನ್ನು ಖರೀದಿಸಿದ್ದಾನೆ. ವಲಸೆ ಕಾರ್ಮಿಕ ಕುಟುಂಬದ ಬಳಿ ಪಡಿತರ ಚೀಟಿ, ಮನರೇಗಾ(ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ)ಅಥವಾ ಗ್ರಾಮೀಣ ಉದ್ಯೋಗ ಯೋಜನೆ ಅಡಿ ಸಿಗುವ ಉದ್ಯೋಗದ ಕಾರ್ಡ್ ಕೂಡ ಇಲ್ಲ. ಗಂಡ-ಹೆಂಡತಿಗೆ ಇದೀಗ ಈ ಕಾರ್ಡ್‌ಗಳನ್ನು ಒದಗಿಸಲಾಗಿದೆ.

 ಲಕ್ನೋದಿಂದ 150 ಕಿ.ಮೀ.ದೂರವಿರುವ ಕನೌಜ್ ಜಿಲ್ಲೆಯ ಫತೇಪುರ ಜಸೋಡ ಹಳ್ಳಿಯಲ್ಲಿರುವ ಶ್ರೀರಾಮ್ ಎಂಬ ಕಾರ್ಮಿಕ ಮದುವೆ ಮಾಡಿಕೊಂಡ ಬಳಿಕ ಮೂರು ದಶಕಗಳ ಹಿಂದೆ ತಮಿಳುನಾಡಿಗೆ ವಲಸೆ ಹೋಗಿದ್ದ. ತಮಿಳುನಾಡಿನ ಕುಡಲೂರಿನಲ್ಲಿ ಕುಲ್ಫಿ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದ. ಅಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ 9 ಮಕ್ಕಳ ಜೊತೆಗೆ ವಾಸಿಸುತ್ತಿದ್ದ. ಮೇ ಮೂರನೇ ವಾರ ಮನೆಯ ಮಾಲಕ ಮನೆ ಖಾಲಿ ಮಾಡಿ ತಮ್ಮ ಊರಿಗೆ ತೆರಳುವಂತೆ ಒತ್ತಾಯಿಸಿದ್ದ. ಶ್ರೀರಾಮ್ ಕುಟುಂಬ ಮೇ 19ರಂದು ರೈಲನ್ನು ಏರಿ ಎರಡು ದಿನಗಳ ಬಳಿಕ ತಮ ್ಮಹಳ್ಳಿಯನ್ನು ಸೇರಿಕೊಂಡಿತ್ತು.

"ನಾವು ಗ್ರಾಮಕ್ಕೆ ಬಂದ ಬಳಿಕ ಸರಕಾರವು 10 ಕೆಜಿ ಅಕ್ಕಿ ಹಾಗೂ ಬೇಳೆಕಾಳು ನೀಡಿತ್ತು. ನಮ್ಮದು ದೊಡ್ಡ ಕುಟುಂಬ. ಅಕ್ಕಿ-ಕಾಳು ಬೇಗನೆ ಖಾಲಿಯಾಗಿತ್ತು. ನನ್ನ ತಾಯಿ ಹಾಗೂ ಇಬ್ಬರು ಒಡಹುಟ್ಟಿದವರು ಅನಾರೋಗ್ಯಕ್ಕೀಡಾದ ಬಳಿಕ ನನ್ನ ತಂದೆ ಊರಲ್ಲೇ ಕೆಲಸ ಮಾಡಲು ಆರಂಭಿಸಿದ್ದರು. ಆದರೆ, ಎರಡೇ ದಿನದಲ್ಲಿ ಕೆಲಸ ಕಳೆದುಕೊಂಡರು. ಅಂತಿಮವಾಗಿ ಬೇರೆ ದಾರಿಯಿಲ್ಲದೆ ತಾಯಿ ಬಳಸುತ್ತಿದ್ದ ಚಿನ್ನವನ್ನು ಮಾರಾಟ ಮಾಡಿದೆವು. ಇದರಿಂದ ಕೆಲವು ದಿನಗಳ ಕಾಲ ನಮಗೆ ಆಹಾರ ಲಭಿಸಿತ್ತು. ಇದೀಗ ನಮ್ಮಲ್ಲಿ ಮಾರಾಟ ಮಾಡಲು ಏನೂ ಉಳಿದಿಲ್ಲ''ಎಂದು ಶ್ರೀರಾಮ್‌ನ ಪುತ್ರಿ ರಾಜ್‌ಕುಮಾರಿ ಹೇಳಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News