×
Ad

ವಿವಾದಕ್ಕೆ ಕಾರಣವಾದ ಅಮಿತ್ ಶಾ ವರ್ಚುವಲ್ ರ‌್ಯಾಲಿ, ಎಲ್‍ಇಡಿ ಟಿವಿಗಳು

Update: 2020-06-11 12:33 IST
Photo: Twitter

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಕುಗ್ರಾಮವೊಂದರಲ್ಲಿ ಬಿದಿರಿನ ಮರಗಳಿಗೆ ಕಟ್ಟಲ್ಪಟ್ಟಿದ್ದ ಎಲ್‍ಇಡಿ ಟಿವಿಯೊಂದರ ಎದುರುಗಡೆ ಗ್ರಾಮಸ್ಥರು ಕುಳಿತುಕೊಂಡು ಟಿವಿಯಲ್ಲಿ ಅಮಿತ್ ಶಾ ಭಾಷಣವನ್ನು ಆಲಿಸುತ್ತಿರುವ ಫೋಟೋವೊಂದು ಟ್ವಿಟ್ಟರ್‍ನಲ್ಲಿ ಆಕ್ರೋಶಭರಿತ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. 

ಪಶ್ಚಿಮ ಬಂಗಾಳ ಇನ್ನಷ್ಟೇ ಅಂಫಾನ್ ಚಂಡಮಾರುತವುಂಟು ಮಾಡಿದ ಹಾನಿಯಿಂದ ಚೇತರಿಸಿಕೊಳ್ಳಬೇಕಿದ್ದರೆ ಹಾಗೂ ದೇಶ ಕೊರೋನವೈರಸ್ ಸಮಸ್ಯೆಯಿಂದ ಇನ್ನೂ ಕಂಗೆಟ್ಟಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಿಂದೀಗಲೇ ಪ್ರಚಾರವನ್ನು ಆರಂಭಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೆ  ಈ ವರ್ಚುವಲ್ ಪ್ರಚಾರ ರ‌್ಯಾಲಿಗಾಗಿ ರಾಜ್ಯಾದ್ಯಂತ ಬಿಜೆಪಿಯು 70,000 ಫ್ಲ್ಯಾಟ್ ಟಿವಿ ಸೆಟ್ ಹಾಗೂ 15,000 ದೈತ್ಯ ಎಲ್‍ಇಡಿ ಪರದೆಗಳನ್ನು ಅಳವಡಿಸಿರುವುದೂ  ಸಾಕಷ್ಟು ಮಂದಿಯ ಹುಬ್ಬೇರಿಸಿದೆ. ರಾಜ್ಯದಲ್ಲಿ ಅಂದಾಜು 78,000 ಮತಗಟ್ಟೆಗಳಿವೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಗ್ರಾಮಸ್ಥರು ಶಾ ಭಾಷಣವನ್ನು ಟಿವಿ ಪರದೆಯ ಮುಂದೆ ಕುಳಿತುಕೊಂಡು ಕೇಳುತ್ತಿರುವ ಫೋಟೋ ಟ್ವೀಟ್ ಮಾಡಿ, ಜನರನ್ನು ತಲುಪಲು ಬಿಜೆಪಿ ಮಾಡುತ್ತಿರುವ ಯತ್ನಗಳನ್ನು ಹೊಗಳಿದರು.

ಆದರೆ ಈ ಫೋಟೋ ಹಾಗೂ ಶಾ ಅವರ ವರ್ಚುವಲ್ ರ‌್ಯಾಲಿ ವಿಪಕ್ಷಗಳಿಂದ ಭಾರೀ ತರಾಟೆಗೊಳಗಾಗಿದೆ. ಬಡವರಿಗೆ ಹಾಗೂ ವಲಸಿಗ ಕಾರ್ಮಿಕರಿಗೆ ರೂ. 7,500 ನೀಡಲು ಹಾಗೂ ಅವರಿಗೆ ಸಾರಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗದ ಪಕ್ಷ ತನ್ನ ಚುನಾವಣಾ ಪ್ರಚಾರಕ್ಕಾಗಿ ಸರ್ವರೀತಿಯಲ್ಲಿ ಮುಂದುವರಿದಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ರಾಕೇಶ್ ಸಚನ್ ಹೇಳಿದರೆ, ಎಎಪಿ ಕ್ಯಾಪ್ಶನ್ ನೀಡಿ ಎಂದು ಹೇಳಿ ಆ ಫೋಟೋ ಟ್ವೀಟ್ ಮಾಡಿ "ವೆಂಟಿಲೇಟರ್‍ಗಳ ಬದಲು ಎಲ್‍ಇಡಿ ಪರದೆಗಳು, ದೇಶ ನಿಜಕ್ಕೂ ಬದಲಾಗುತ್ತಿದೆ,'' ಎಂದು ಟ್ವೀಟ್ ಮಾಡಿದೆ.

ವಲಸಿಗ ಕಾರ್ಮಿಕರು ಇನ್ನೂ ಬಿಹಾರದ ತಮ್ಮ ಮನೆಗಳಿಗೆ ತಲುಪದೇ ಇದ್ದರೂ ಬಿಜೆಪಿಯ ಎಲ್‍ಇಡಿ ಸ್ಕ್ರೀನ್‍ಗಳು ಅವುಗಳಿಗಿಂತ ಮುನ್ನ ತಲುಪಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. "ಬಿಜೆಪಿಗೆ ಎಲ್ಲಾ ರಾಜ್ಯಗಳಲ್ಲಿ ಹೇಗಾದರೂ ಮಾಡಿ ಅಧಿಕಾರ ಬೇಕಿದೆ. ವೆಂಟಿಲೇಟರ್‍ಗಳ ವಿಚಾರ ಹೇಳುವುದಾದರೆ  ಗುಜರಾತ್‍ನಲ್ಲಿ ಇತ್ತೀಚೆಗೆ ಆರ್ಡರ್ ಮಾಡಲಾದ ವೆಂಟಿಲೇಟರ್‍ಗಳ ಗುಣಮಟ್ಟದ ಬಗ್ಗೆ ಎಲ್ಲರಿಗೂ ತಿಳಿದಿದೆ,'' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News