ಫ್ಯಾನ್ ಕದ್ದ ಆರೋಪ: ಮೂವರು ದಲಿತರನ್ನು ಥಳಿಸಿ, ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಗ್ರಾಮಸ್ಥರು

Update: 2020-06-11 07:51 GMT
Photo: Twitter

ಲಕ್ನೋ: ಗುಜರಾತ್ ರಾಜ್ಯದಲ್ಲಿ ನಡೆದ ಅಮಾನುಷ ಉನಾ ಘಟನೆಯನ್ನು ನೆನಪಿಗೆ ತರುವಂತಹ ಇನ್ನೊಂದು ಘಟನೆ ಲಕ್ನೋದ ಬರೌಲಿ ಖಲೀಲಾಬಾದ್ ಗ್ರಾಮದಲ್ಲಿ ನಡೆದಿದೆ. ಈ  ಗ್ರಾಮದಲ್ಲಿ ಮೂವರು ದಲಿತ ಯುವಕರನ್ನು ಕಟ್ಟಿ ಹಾಕಿ, ಥಳಿಸಿ, ಅವರ ತಲೆಯನ್ನು ಬೋಳಿಸಿ, ಚಪ್ಪಲಿಯ ಹಾರ ಹಾಕಿ ಅವರನ್ನು ಊರಲ್ಲಿ ಮೆರವಣಿಗೆ ನಡೆಸಲಾಗಿದೆ. ಈ ಮಂದಿ 'ಫ್ಯಾನ್ ಕದ್ದಿದ್ದಾರೆ' ಎಂಬ ಆರೋಪದ ಮೇಲೆ ಇಷ್ಟೆಲ್ಲಾ ಹಿಂಸೆ ನೀಡಲಾಗಿದೆ ಎಂದು thequint.com ವರದಿ ಮಾಡಿದೆ. 

ಘಟನೆ ಜೂನ್ 4ರಂದು ನಡೆದಿತ್ತು. ಇತರ ಹಿಂದುಳಿದ ವರ್ಗಕ್ಕೆ  ಸೇರಿದ ಒಬ್ಬ ವ್ಯಕ್ತಿ ಹಾಗೂ  ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ವ್ಯಕ್ತಿಗಳು ಸ್ಥಳೀಯ 'ಮೇಲ್ವರ್ಗದ' ವ್ಯಕ್ತಿಯೊಬ್ಬನ ಮನೆಯಿಂದ ಫ್ಯಾನ್ ಕದಿಯುವಾಗಿ ಸಿಕ್ಕಿ ಬಿದ್ದಿದ್ದರೆಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಈ ಮೂವರನ್ನು ಆ ಕುಟುಂಬದವರು ಸೆರೆ ಹಿಡಿದಾಗ ಅಲ್ಲಿ ಗ್ರಾಮಸ್ಥರೂ ಸೇರಿ ಅವರಿಗೆ ಥಳಿಸಿದ್ದರು. ನಂತರ ಅವರನ್ನು ಅವಮಾನಿಸುವ ಉದ್ದೇಶದಿಂದ ಅವರ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಲಾಗಿತ್ತು ಎನ್ನಲಾಗಿದೆ.

ಘಟನೆ ಸಂಬಂಧ ಎರಡೂ ಕಡೆಗಳವರ ವಿರುದ್ಧ ಪ್ರಕರಣ ದಾಖಲಾಗಿದೆ. ಫ್ಯಾನ್ ಕದ್ದ ಆರೋಪದ ಮೇಲೆ ಆ ಮೂವರನ್ನು ಬಂಧಿಸಲಾಗಿದ್ದರೆ, ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯ ವೀಡಿಯೋ ಹಾಗೂ ಫೋಟೋಗಳ ಆಧಾರದಲ್ಲಿ ಇತರ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News