ಐದು ವಿದ್ಯಾರ್ಥಿಗಳ ಸ್ಟಾರ್ಟ್ ಅಪ್ ನಲ್ಲಿ ರೂ. 7.5 ಕೋಟಿ ಹೂಡಿಕೆ ಮಾಡಿದ ಆನಂದ್ ಮಹೀಂದ್ರ

Update: 2020-06-11 10:56 GMT

ಹೊಸದಿಲ್ಲಿ: ಖ್ಯಾತ ಉದ್ಯಮಿ ಹಾಗೂ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಗುರುಗ್ರಾಮ ಮೂಲದ ಸ್ಟಾರ್ಟ್ ಅಪ್- ಹಪ್ರಂಪ್‍ನಲ್ಲಿ ಒಂದು ಮಿಲಿಯನ್ ಡಾಲರ್ (ಸುಮಾರು ರೂ 7.5 ಕೋಟಿ) ಹೂಡಿಕೆ ಮಾಡಿದ್ದಾರೆ.

ಈ ಸ್ಟಾರ್ಟ್ ಅಪ್ ಅನ್ನು ಎರಡು ವರ್ಷಗಳ ಹಿಂದೆ ವಡೋದರಾದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಇಲ್ಲಿನ ಐದು ಮಂದಿ ವಿದ್ಯಾರ್ಥಿಗಳು ಆರಂಭಿಸಿದ್ದರು.

"ನಾನು ಎದುರು ನೋಡುತ್ತಿದ್ದ ಸ್ಟಾರ್ಟ್ ಅಪ್ ಅನ್ನು ಕೊನೆಗೂ ಕಂಡು ಹಿಡಿದೆ. @Hapramp ದೇಶಿಯ ಸಂಸ್ಥೆಯಾಗಿದೆ. ಇದು ಸೃಜನಾತ್ಮಕತೆ, ತಂತ್ರಜ್ಞಾನ ಮತ್ತು ಡಾಟಾ ಸಂರಕ್ಷಣೆಯೆ ಸಮ್ಮಿಳಿತವಾಗಿದೆ. ಅವರ @gosocial_app ಸಾಮಾಜಿಕ ಜಾಲತಾಣವನ್ನು ಎದುರು ನೋಡುತ್ತಿದ್ದೇನೆ,'' ಎಂದು ಆನಂದ್ ಮಹೀಂದ್ರ ಬುಧವಾರ ಟ್ವೀಟ್ ಮಾಡಿದ್ದಾರೆ.

ಕೆಲವೊಂದು ಮಾನದಂಡಗಳನ್ನು ಪೂರೈಸುವ  ಭಾರತೀಯ ಸಾಮಾಜಿಕ ಜಾಲತಾಣ ಸ್ಟಾರ್ಟ್-ಅಪ್ ಮೇಲೆ ಹೂಡಿಕೆ ಮಾಡುವುದಾಗಿ 2018ರಲ್ಲಿ ಆನಂದ್ ಮಹೀಂದ್ರ ಘೋಷಿಸಿದ್ದರು. ಇಂತಹ ಒಂದು ಸಂಸ್ಥೆಯನ್ನು ಹುಡುಕುವಂತೆ ಅವರು ಮಹೀಂದ್ರ ಸಂಸ್ಥೆಯ ಮಾಜಿ ಅಧಿಕಾರಿ ಜಸ್ಪ್ರೀತ್ ಬಿಂದ್ರಾ ಅವರನ್ನು ಕೇಳಿಕೊಂಡಿದ್ದರು.

ಹಪ್ರಂಪ್ ತಂಡ ವೆಬ್ 3.0 ಸೋಶಿಯಲ್ ನೆಟ್ವರ್ಕ್ ಅಭಿವೃದ್ಧಿ ಪಡಿಸುತ್ತಿದೆ ಎಂದು ಬಿಂದ್ರಾ ಹೇಳಿದ್ದಾರೆ. ಅವರು ಹಪ್ರಂಪ್ ಸ್ಥಾಪಕ ತಂಡದ ಮಾರ್ಗದರ್ಶಕರಾಗಿ ಹಾಗೂ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಗುರುಗ್ರಾಮ ಮೂಲದ ಇನ್ಕ್ಯುಬೇಟರ್ ಹಡ್ಡಲ್‍ನಲ್ಲಿ ಮೊದಲು ಹಪ್ರಂಪ್ ರೂಪುಗೊಂಡಿತ್ತು.

ಗೋ ಸೋಶಿಯಲ್ ಹೊರತಾಗಿ ಈ ತಂಡ ಸ್ಟೀಮ್ ಬ್ಲಾಕ್ ಚೈನ್ ಬೆಂಬಲಿತ ಸೋಶಿಯಲ್ ಮೀಡಿಯಾ ತಾಣ 1Ramp.io, ಹಾಗೂ  ಆಸ್ಟೀರಿಯಾ ಪ್ರೊಟೊಕಾಲ್ ಆರಂಭಿಸಿದೆ.

ಗೋ ಸೋಶಿಯಲ್ ಅಧಿಕೃತವಾಗಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದ್ದರೂ ಈಗಾಗಲೇ ಸುಮಾರು 50,000 ಮಂದಿ ಅದನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿದ್ದಾರೆ. ಅದು ಸದ್ಯದಲ್ಲಿಯೇ ಆ್ಯಪಲ್ ಆ್ಯಪ್ ಸ್ಟೋರ್‍ನಲ್ಲೂ ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News