ರಾಜ್ಯ ಸರಕಾರದ ವಿರುದ್ಧ ಟ್ವೀಟ್: ಉತ್ತರ ಪ್ರದೇಶದ ಮಾಜಿ ಐಎಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

Update: 2020-06-12 15:02 GMT

ಲಕ್ನೊ, ಜೂ.12: ಕೊರೋನ ಸೋಂಕು ಪ್ರಕರಣಗಳನ್ನು ಪರೀಕ್ಷಿಸುವ ಕಾರ್ಯನೀತಿಯನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಮಾಜಿ  ಐಎಎಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮಾಜಿ ಐಎಎಸ್ ಅಧಿಕಾರಿ ಸೂರ್ಯಪ್ರತಾಪ್ ಸಿಂಗ್ ಜೂನ್ 10ರಂದು ಮಾಡಿರುವ 10 ಟ್ವೀಟ್‌ಗಳ ಹಿನ್ನೆಲೆಯಲ್ಲಿ ಲಕ್ನೊದ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್ ರ ಟೀಮ್-11 ಸಭೆಯ ಬಳಿಕ, ಅಧಿಕ ಪ್ರಮಾಣದಲ್ಲಿ ಕೊರೋನ ಸೋಂಕು ಪರೀಕ್ಷೆ ನಿರ್ವಹಿಸಿದ ಜಿಲ್ಲಾಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿ ತರಾಟೆಗೆತ್ತಿಕೊಂಡಿದ್ದಾರೆ. ದಯವಿಟ್ಟು ಸ್ಪಷ್ಪಪಡಿಸಿ- ಪರೀಕ್ಷೆಯೇ ಇಲ್ಲದಿದ್ದರೆ ಕೊರೋನ ಸೋಂಕು ಇಲ್ಲ ಎಂಬುದು ರಾಜ್ಯದ ಕಾರ್ಯತಂತ್ರವಾಗಿದೆಯೇ ಎಂದು ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಟ್ವೀಟ್‌ನಲ್ಲಿ ತಪ್ಪು ಮಾಹಿತಿ ಮತ್ತು ವಿಷಯವನ್ನು ಉಲ್ಲೇಖಿಸಲಾಗಿದ್ದು, ಜನತೆಯಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ವಿರುದ್ಧ ಕೊರೋನ ನಿಯಂತ್ರಣಕ್ಕೆ ಜಾರಿಗೊಳಿಸಲಾದ ನಿಯಮವನ್ನು ಪಾಲಿಸದಿರುವುದು ಹಾಗೂ ಪ್ರಚೋದನೆಯ ಉದ್ದೇಶದ ಟ್ವೀಟ್ ಮಾಡಿರುವ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉತ್ತರಪ್ರದೇಶ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಂಗ್ 2015ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ. ನಿವೃತ್ತಿಗೆ ಇನ್ನೂ ಆರು ತಿಂಗಳಿರುವಾಗಲೇ, ಪ್ರಾಮಾಣಿಕ ಅಧಿಕಾರಿಗೆ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದೆ ಎಂದು ಹೇಳಿ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News