ಸ್ತಂಭನಾವಧಿಯಲ್ಲಿ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಕುರಿತು ಮೂರು ದಿನಗಳಲ್ಲಿ ಸಭೆ ನಡೆಸಿ: ಕೇಂದ್ರ, ಆರ್‌ಬಿಐಗೆ ಸುಪ್ರ

Update: 2020-06-12 15:11 GMT

 ಹೊಸದಿಲ್ಲಿ,ಜೂ.12: ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಾವತಿಯನ್ನು ಮುಂದೂಡಲಾಗಿರುವ ಸಾಲದ ಕಂತುಗಳ ಮೇಲೆ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಕುರಿತು ನಿರ್ಧರಿಸಲು ಮೂರು ದಿನಗಳಲ್ಲಿ ಸಭೆಯನ್ನು ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಿತ್ತ ಸಚಿವಾಲಯ ಮತ್ತು ಆರ್‌ಬಿಐಗೆ ಆದೇಶಿಸಿದೆ.

  ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಯ ಮೇಲಿನ ಪರಿಣಾಮಗಳನ್ನು ಪರಿಗಣಿಸಿ ಆರ್‌ಬಿಐ ಗ್ರಾಹಕರ ಸಾಲದ ಕಂತುಗಳ ಮರುಪಾವತಿಯನ್ನು ಮೇ 31ರವರೆಗೆ ಸ್ತಂಭನಗೊಳಿಸಲು ಮಾ.27ರಂದು ಬ್ಯಾಂಕುಗಳಿಗೆ ಅನುಮತಿ ನೀಡಿತ್ತು. ಬಳಿಕ ಸ್ತಂಭನದ ಅವಧಿಯನ್ನು ಆ.31ರವರೆಗೆ ವಿಸ್ತರಿಸಲಾಗಿತ್ತು.

ಸ್ತಂಭನಾವಧಿಯಲ್ಲಿ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಕೇಂದ್ರ ಮತ್ತು ಆರ್‌ಬಿಐಗೆ ನಿರ್ದೇಶ ನೀಡುವಂತೆ ಕೋರಿ ಆಗ್ರಾದ ನಿವಾಸಿ ಗಜೇಂದ್ರ ಶರ್ಮಾ ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ,ಎಸ್.ಕೆ.ಕೌಲ್ ಮತ್ತು ಎಂ.ಆರ್.ಶಾ ಅವರ ಪೀಠವು, ಇದು ಇಡೀ ಸ್ತಂಭನಾವಧಿಗೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವ ಪ್ರಶ್ನೆಯಲ್ಲ,ಆದರೆ ಬ್ಯಾಂಕುಗಳು ಮೂಲ ಬಡ್ಡಿಯ ಮೇಲೆ ವಿಧಿಸುವ ಬಡ್ಡಿ (ಚಕ್ರಬಡ್ಡಿ)ಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿತು. ಈ ವಿಷಯದಲ್ಲಿ ಸಂತುಲಿತ ಅಭಿಪ್ರಾಯವನ್ನು ತಳೆಯಲು ತಾನು ಪ್ರಯತ್ನಿಸುತ್ತಿರುವುದಾಗಿಯೂ ಅದು ತಿಳಿಸಿತು.

ಬಡ್ಡಿ ಪಾವತಿಯನ್ನು ಮೂರು ತಿಂಗಳ ಅವಧಿಗೆ ಮುಂದೂಡಲಾಗಿದ್ದರೆ ಬ್ಯಾಂಕುಗಳು ಆ ಮೊತ್ತವನ್ನು ಪಾವತಿಸಬೇಕಿರುವ ಸಾಲದ ಹಣಕ್ಕೆ ಸೇರಿಸಬಾರದು ಮತ್ತು ಬಡ್ಡಿಯ ಮೇಲೆ ಬಡ್ಡಿಯನ್ನು ವಿಧಿಸಬಾರದು ಎಂದು ಹೇಳಿದ ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

 ಈ ವಿಷಯದಲ್ಲಿ ಆರ್‌ಬಿಐ ಜೊತೆ ಸಭೆಯನ್ನು ತಾನು ಕೋರಿದ್ದೇನೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ತಿಳಿಸಿದಾಗ,ಸಭೆಯ ಬಳಿಕ ಕೈಗೊಂಡ ನಿರ್ಧಾರದ ಕುರಿತು ಅಫಿಡವಿಟ್ ಅನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News