ತಾರತಮ್ಯಕರ ಜಾಹೀರಾತು ಮಾದರಿಯನ್ನು ಕೊನೆಗೊಳಿಸಲು ಗೂಗಲ್ ಮುಂದು
ಓಕ್‌ಲ್ಯಾಂಡ್ (ಕ್ಯಾಲಿಫೋರ್ನಿಯ), ಜೂ. 12: ಬಳಕೆದಾರರ ಪೋಸ್ಟಲ್ ಕೋಡ್, ಲಿಂಗ, ಪ್ರಾಯ, ಹೆತ್ತವರ ವಿವರ ಅಥವಾ ಮದುವೆ ವಿವರಗಳನ್ನು ಆಧರಿಸಿ, ಬೇಕಾದವರಿಗೆ ಮಾತ್ರ ಗೃಹ, ಉದ್ಯೋಗ ಮತ್ತು ಸಾಲ ನೀಡಿಕೆ ಜಾಹೀರಾತುಗಳನ್ನು ತಲುಪಿಸುವ ಕಾನೂನುಬಾಹಿರ ತಾರತಮ್ಯಕರ ಜಾಹೀರಾತು ಮಾದರಿಯನ್ನು ಕೊನೆಗೊಳಿಸಲು ನಿರ್ಧರಿಸಿರುವುದಾಗಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಗುರುವಾರ ಹೇಳಿದೆ.
ಗೂಗಲ್‌ನ ನೂತನ ನೀತಿಯು ಅಮೆರಿಕ ಮತ್ತು ಕೆನಡಗಳಲ್ಲಿ ಈ ವರ್ಷದ ಕೊನೆಯ ವೇಳೆಗೆ ಜಾರಿಗೆ ಬರಲಿದೆ.
ತಾರತಮ್ಯಕರ ಗೃಹ ಜಾಹೀರಾತುಗಳನ್ನು ಮಾರಾಟ ಮಾಡಿರುವುದಕ್ಕಾಗಿ ಅಮೆರಿಕದ ಗೃಹನಿರ್ಮಾಣ ಮತ್ತು ನಗರಾಭಿವೃದ್ಧಿ ಇಲಾಖೆಯು ಫೇಸ್‌ಬುಕ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯ ಬಳಿಕ ಗೂಗಲ್ ಈ ಕ್ರಮ ತೆಗೆದುಕೊಂಡಿದೆ. ಗೂಗಲ್ ಮತ್ತು ಟ್ವಿಟರ್ ವಿರುದ್ಧವಿರುವ ಇಂಥದೇ ಆರೋಪಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿಯೂ ಇಲಾಖೆ ಎಚ್ಚರಿಕೆ ನೀಡಿತ್ತು.
ಬಿಳಿಯ ಪೊಲೀಸರ ಕೈಯಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅಮಾನುಷವಾಗಿ ಮೃತಪಟ್ಟ ಬಳಿಕ ಅಮೆರಿಕದಾದ್ಯಂತ ನಡೆದ ಬೃಹತ್ ಪ್ರತಿಭಟನಾ ಪ್ರದರ್ಶನಗಳು, ದೇಶದಲ್ಲಿನ ಜನಾಂಗೀಯ ಅಸಮಾನತೆಗಳ ಬಗ್ಗೆಯೂ ಬೆಳಕು ಚೆಲ್ಲಿವೆ. ಉದ್ಯೋಗ ಮತ್ತು ಮನೆಗಳನ್ನು ಪಡೆಯುವಲ್ಲಿ ಕರಿಯ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಹೊಸದಾಗಿ ಚರ್ಚೆಗಳು ನಡೆಯುತ್ತಿವೆ. ಹಾಗಾಗಿ, ಗೂಗಲ್‌ನ ಈ ಕ್ರಮವು ಮಹತ್ವ ಪಡೆದುಕೊಂಡಿದೆ.
ಆದರೆ, ತನ್ನ ನೂತನ ನೀತಿಯು ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಲ್ಲ ಎಂದು ಗೂಗಲ್ ಹೇಳಿದೆ.