ಅಧಿಕಾರಕ್ಕೆ ಮರಳಲು ಚುನಾವಣೆಯಲ್ಲಿ ಟ್ರಂಪ್ ಅಕ್ರಮ: ಜೋ ಬೈಡನ್ ಆತಂಕ
ವಾಶಿಂಗ್ಟನ್, ಜೂ. 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಸುವ ಮೂಲಕ ಗೆಲ್ಲಲು ಯತ್ನಿಸುತ್ತಾರೆ ಹಾಗೂ ಒಂದು ವೇಳೆ ಅವರು ಸೋತರೆ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂಬ ಭೀತಿಯನ್ನು ಚುನಾವಣೆಯಲ್ಲಿ ಅವರ ಎದುರಾಳಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವ್ಯಕ್ತಪಡಿಸಿದ್ದಾರೆ.
‘‘ನನ್ನ ಏಕೈಕ ದೊಡ್ಡ ಆತಂಕ ಎಂದರೆ, ಈ ಅಧ್ಯಕ್ಷರು ಈ ಚುನಾವಣೆಯಲ್ಲಿ ಅಕ್ರಮ ಎಸಗಿ ವಿಜಯಿಯಾಗಲು ಪ್ರಯತ್ನಿಸುತ್ತಾರೆ’’ ಎಂದು ಬುಧವಾರ ತಡರಾತ್ರಿ ಪ್ರಸಾರವಾದ ‘ಡೇಲಿ ಶೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೈಡನ್ ಹೇಳಿದರು.
ಜಾರ್ಜಿಯ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ದೋಷಪೂರಿತ ಮತಯಂತ್ರಗಳನ್ನು ಬಳಸಲಾಗಿತ್ತು ಹಾಗೂ ಹಲವು ಸ್ಥಳಗಳಲ್ಲಿ ಉದ್ದನೆ ಸಾಲುಗಳಿಂದಾಗಿ ಮತದಾರರು ರೋಸಿ ಹೋಗಿದ್ದರು. ಈ ಘಟನೆಗಳ ಹಿನ್ನೆಲೆಯಲ್ಲಿ, ಮತದಾರರನ್ನು ಹತ್ತಿಕ್ಕುವ ತಂತ್ರಗಳ ಬಗ್ಗೆ ವ್ಯಾಪಕ ಚರ್ಚೆ ಆರಂಭಗೊಂಡಿದೆ. ಇದೇ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷರೂ ಆಗಿರುವ 77 ವರ್ಷದ ಜೋ ಬೈಡನ್ ಈ ಕಳವಳ ವ್ಯಕ್ತಪಡಿಸಿದ್ದಾರೆ.
‘‘ಎಲ್ಲ ಅಂಚೆ ಮತಪತ್ರಗಳಲ್ಲಿ ಅಕ್ರಮ ನಡೆಯುತ್ತವೆ ಎಂದು ಹೇಳಿದ ವ್ಯಕ್ತಿ ಅವರು’’ ಎಂದರು.
‘ಟ್ರಂಪ್ ಅಧಿಕಾರ ಬಿಟ್ಟುಕೊಡದಿದ್ದರೆ, ಸೇನೆಯ ಮೇಲೆ ನಂಬಿಕೆಯಿದೆ’
ಒಂದು ವೇಳೆ, ಚುನಾವಣೆಯಲ್ಲಿ ಸೋತರೂ ಟ್ರಂಪ್ ಅಧಿಕಾರ ಬಿಟ್ಟುಕೊಡಲಾರರು ಎಂದು ನೀವು ಭಾವಿಸಿದ್ದೀರಾ ಎಂಬ ಪ್ರಶ್ನೆಗೆ ಹೌದೆಂದು ಬೈಡನ್ ಉತ್ತರಿಸಿದರು.
‘‘ಆದರೆ ನನಗೆ ಸೇನೆಯಲ್ಲಿ ನಂಬಿಕೆಯಿದೆ. ಅಗತ್ಯ ಬಿದ್ದರೆ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಸೇನೆ ನೆರವಾಗಲಿದೆ ಎಂಬ ಭರವಸೆಯಿದೆ’’ ಎಂದು ಹೇಳಿದರು.