ಕುಂಜೂರಿನಲ್ಲಿ 13ನೇ ಶತಕದ ತುಳು ಶಾಸನ: ಇತಿಹಾಸ ಸಂಶೋಧಕರಿಂದ ಓದುವ ಪ್ರಯತ್ನ

Update: 2020-06-12 17:55 GMT

ಪಡುಬಿದ್ರಿ: ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ಗೋಪುರದ ಇಕ್ಕೆಲಗಳಲ್ಲಿ  ಇದ್ದ ಎರಡು "ತುಳು ಲಿಪಿಯಲ್ಲಿ ಬರೆದ ತುಳುಭಾಷೆಯ" 13 ನೇ ಶತಮಾನ ಎಂದು ಹೇಳಲಾಗುವ ಶಾಸನಗಳನ್ನು ಇತಿಹಾಸ ಸಂಶೋಧಕ ಬಂಟಕಲ್ಲಿನ ಸುಭಾಸ್ ನಾಯಕ್ ಅವರು ಓದುವ ಪ್ರಯತ್ನ ಮಾಡಿದ್ದಾರೆ.

ಕಾಮಗಾರಿ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿ ಓದಲಾಗದ ಸ್ಥಿತಿಯಲ್ಲಿದೆ. ಆದರೆ ಕಾಣುವ ಅಕ್ಷರಗಳನ್ನು ಗಮನಿಸಿದಾಗ ಅದು ತುಳು ಲಿಪಿಯ ಶಾಸನವೆಂದು ನಾಯಕ್ ಹೇಳುತ್ತಾರೆ. ಇನ್ನೊಂದು ಶಾಸನವು ದೇವಳದ ಈಶಾನ್ಯದಲ್ಲಿದೆ. ಇದು ಕೂಡಾ ಬಹುತೇಕ ಅಳಿಸಿಹೋಗಿದೆ. ಕೆಲವು ಅಕ್ಷರಗಳು ಅಳಿಸಿ ಹೋಗಿದ್ದರೂ ಓದಲು ಸಾಧ್ಯವಾಗುತ್ತದೆ. ಈ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ - ಚಂದ್ರರ ಉಬ್ಬುಶಿಲ್ಪವಿದೆ. ಸ್ವಸ್ತಿಶ್ರೀಃ ಎಂದು ಪ್ರಾರಂಭವಾಗುವ ಬರಹವು 'ಮೀನಸ್ಯ' ಅಂದರೆ ಮೀನಮಾಸದಲ್ಲಿ. ಮುಂದೆ 'ವಲ್ಲ ಮಹಾದೇವರ  ಕಾಲನ್ಟ್ ' ಎಂದು  ಓದಬಹುದಾಗುತ್ತದೆ. ವಲ್ಲ ಮಹಾದೇವರ ಕಾಲನ್ಟ್ ಎಂದರೆ ವಲ್ಲ ಮಹಾದೇವರ ಕಾಲದಲ್ಲಿ ಎಂದಾಗಿದೆ ಎನ್ನುತ್ತಾರೆ. 

ಬಳಿಕ ಕೆಳಗಿನ ಸಾಲಿನಲ್ಲಿ ಇರುವ ಅಕ್ಷರಗಳು ಅಸ್ಪಷ್ಟವಾಗಿವೆ. ಪಳಂ ತುಳುವಾಗಿರುವುದರಿಂದ ಶಬ್ದ ಸಂಯೋಜನೆ ಕಷ್ಟಸಾಧ್ಯ. ಅನಂತರದ ಒಂದು ಸಾಲಿನಲ್ಲಿ 'ತುನರ ಪುರತ್ ನಯೆ' ಮುಂದುವರಿದರೆ 'ಮುದೆಲಾಯ' ಮುಂತಾದ ಶಬ್ದಗಳು ಸಿಗುತ್ತವೆ. ಇನ್ನುಳಿದಂತೆ ಅಕ್ಷರಗಳು ಒಂದೋ ಸಿಮೆಂಟ್ ಬಿದ್ದು ಅಥವಾ ಸವೆದು ಹೋಗಿದೆ. ಆದರೆ ಇದು ತುಳು ಭಾಷೆಯ ತುಳುಲಿಪಿಯಲ್ಲಿರುವ ಶಾಸನವಾದುದರಿಂದ ಮುಂದಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ  ನಾಯಕ್ .

ಈ ಶಾಸನದಲ್ಲಿ ಉಲ್ಲೇಖವಾಗಿರುವ 'ವಲ್ಲ ಮಹಾದೇವ' ನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230 - 1250. ಅಂದರೆ 13 ನೇ ಶತಮಾನ ಎಂದು ಸುಭಾಸ್ ನಾಯಕ್ ಹೇಳಿದ್ದಾರೆ. ಇವರು ತುಳು ಶಾಸನ ಓದುವ ಬೆರಳೆಣಿಕೆಷ್ಟು ವಿದ್ವಾಂಸರಲ್ಲಿ ಒಬ್ಬರು. ಕ್ಷೇತ್ರಕಾರ್ಯದಲ್ಲಿ ಗುರುಪ್ರಸಾದ ನಾಯಕ್ ಸಹಕರಿಸಿದ್ದರು. ದೇವಸ್ಥಾನದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. 

ಕುಂಜೂರಿಗೆ ಬಹಳಷ್ಟು ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆ ಇದೆ. ಈ ಶಾಸನದ ಅಧ್ಯಯನಕ್ಕೆ ಬೇಕಾದ ಲಭ್ಯ ಮಾಹಿತಿಗಳನ್ನು ಸ್ಥಳೀಯರು ಒದಗಿಸಲು ಅಣಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News