×
Ad

​ವಿಮಾನ, ರೈಲು ಪ್ರಯಾಣಕ್ಕೆ 'ಆರೋಗ್ಯಸೇತು' ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

Update: 2020-06-13 09:29 IST

ಬೆಂಗಳೂರು, ಜೂ.13: ಆರೋಗ್ಯಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಐಚ್ಛಿಕ. ಇದು ವಿಮಾನ ಮತ್ತು ರೈಲು ಪ್ರಯಾಣಕ್ಕೆ ಕಡ್ಡಾಯವಲ್ಲ; ಈ ಸಂಬಂಧ ಇತ್ತೀಚೆಗೆ ನೀಡಿರುವ ಮಾರ್ಗಸೂಚಿ ಸಲಹೆಯ ಸ್ವರೂಪದ್ದು ಎಂದು ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿದೆ.

ಪ್ರಯಾಣಿಕರು ಆರೋಗ್ಯಸೇತು ಆ್ಯಪ್ ಹೊಂದಿಲ್ಲದಿದ್ದರೆ, ಸ್ವಯಂ ದೃಢೀಕರಣ ನಮೂನೆಯನ್ನು ಭರ್ತಿ ಮಾಡಿ ಪ್ರಯಾಣ ಮಾಡಲು ಅವಕಾಶವಿದೆ ಎಂದು ಹೇಳಿದೆ. ಹಿಂದಿನ ಮಾರ್ಗಸೂಚಿಯನ್ನು ಪರಿಷ್ಕರಿಸಿ ಹೊಸದಾಗಿ ನೀಡಿರುವ ಮಾರ್ಗಸೂಚಿ ಹಾಗೂ ಮೆಮೊವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದನ್ನು ದಾಖಲೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಕೇಂದ್ರದ ಮಾರ್ಗಸೂಚಿಯ ಕಾನೂನಾತ್ಮಕ ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾದ ಇತರ ಅಂಶಗಳ ಬಗ್ಗೆ ಆಕ್ಷೇಪಣೆಯನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಲಾಗಿದೆ. ಕಾನೂನಿನ ಆದೇಶ ಇಲ್ಲದೇ ಆರೋಗ್ಯಸೇತು ಆ್ಯಪ್ ಕಡ್ಡಾಯಪಡಿಸಲಾಗದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಕೇಂದ್ರ ಅಥವಾ ರಾಜ್ಯ ಸರ್ಕಾರ ಆ್ಯಪ್ ಕಡ್ಡಾಯಪಡಿಸಬಹುದೇ ಎಂದು ಪ್ರಶ್ನಿಸಲಾಗಿದೆ.

ದಿಲ್ಲಿಯ ಎನ್‌ ಜಿಓ ಜತೆ ಗುರುತಿಸಿಕೊಂಡಿರುವ ಡಿಜಿಟಲ್ ಹಕ್ಕುಗಳ ಹೋರಾಟಗಾರ, ಬೆಂಗಳೂರಿನ ಅನಿವರ್ ಎ. ಅರವಿಂದ್ ಎಂಬುವವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರೋಗ್ಯಸೇತು ಶಿಷ್ಟಾಚಾರವು ಖಾಸಗಿತನದ ಹಕ್ಕು ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ಆಪಾದಿಸಿದ್ದರು. ಆ್ಯಪ್ ಕಡ್ಡಾಯಪಡಿಸುವ ಯಾವ ಕಾನೂನು ಕೂಡಾ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News