ಭಾರತದ ಭೂಪ್ರದೇಶಗಳಿರುವ ಹೊಸ ಭೂಪಟಕ್ಕೆ ನೇಪಾಳ ಸಂಸತ್ ಕೆಳಮನೆ ಅಂಗೀಕಾರ
ಹೊಸದಿಲ್ಲಿ,ಜೂ.13: ಭಾರತದೊಂದಿಗಿನ ಗಡಿಯಲ್ಲಿನ ವ್ಯೆಹಾತ್ಮಕವಾಗಿ ಪ್ರಮುಖ ಪ್ರದೇಶಗಳಾಗಿರುವ ಲಿಪುಲೇಖ್,ಕಾಲಾಪಾನಿ ಮತ್ತು ಲಿಂಪಿಯಾಧುರಾಗಳ ಮೇಲೆ ತನ್ನ ಹಕ್ಕನ್ನು ಮಂಡಿಸಿ ರಾಜಕೀಯ ಭೂಪಟವನ್ನು ಪರಿಷ್ಕರಿಸುವ ಸಂವಿಧಾನ ತಿದ್ದುಪಡಿಯನ್ನು ನೇಪಾಳದ ಸಂಸತ್ತಿನ ಕೆಳಮನೆ ಶನಿವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ನೇಪಾಳಿ ಕಾಂಗ್ರೆಸ್,ರಾಷ್ಟ್ರೀಯ ಜನತಾ ಪಾರ್ಟಿ-ನೇಪಾಳ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ನೂತನ ವಿವಾದಾತ್ಮಕ ಭೂಪಟವನ್ನು ಸೇರಿಸುವ ಮೂಲಕ ರಾಷ್ಟ್ರೀಯ ಲಾಂಛನವನ್ನು ಹೊಸದಾಗಿ ರೂಪಿಸಲು ಸಂವಿಧಾನದ ಅನುಸೂಚಿ 3 ಅನ್ನು ತಿದ್ದುಪಡಿಗೊಳಿಸುವ ಸರಕಾರಿ ಮಸೂದೆಯ ಪರವಾಗಿ ಮತ ಚಲಾಯಿಸಿದವು. 275 ಸದಸ್ಯ ಬಲದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಥವಾ ಕೆಳಮನೆಯಲ್ಲಿ ಮಸೂದೆಯು ಅಂಗೀಕಾರಗೊಳ್ಳಲು ಮೂರನೇ ಎರಡರಷ್ಟು ಬಹುಮತ ಅಗತ್ಯವಾಗಿತ್ತು.
ಭಾರತದೊಂದಿಗಿನ ಗಡಿವಿವಾದದ ನಡುವೆಯೇ ಜೂ.9ರಂದು ಸಂಸತ್ತು ರಾಜಕೀಯ ಭೂಪಟವನ್ನು ಪರಿಷ್ಕರಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರುವ ಪ್ರಸ್ತಾವವನ್ನು ಸರ್ವಾನುಮತದಿಂದ ಅನುಮೋದಿಸಿತ್ತು.
ನೇಪಾಳ ಸಂಸತ್ತಿನಲ್ಲಿ ಮತದಾನಕ್ಕೆ ಕೇವಲ ಎರಡು ದಿನಗಳ ಮುನ್ನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ‘ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ’ಎಂದಷ್ಟೇ ಹೇಳುವ ಮೂಲಕ ಮತದಾನ ಅಥವಾ ನೇಪಾಳ ಸರಕಾರವನ್ನು ಸಂಪರ್ಕಿಸುವುದಕ್ಕೆ ಸಂಬಂಧಿಸಿದ ಸುದ್ದಿಗಾರರ ಎಲ್ಲ ಪ್ರಶ್ನೆಗಳನ್ನು ತಳ್ಳಿಹಾಕಿದ್ದರು ಮತ್ತು ನೇಪಾಳದೊಂದಿಗಿನ ನಾಗರಿಕ,ಸಾಂಸ್ಕೃತಿಕ ಮತ್ತು ಸ್ನೇಹಪರ ಸಂಬಂಧಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದ್ದರು. ಒಂದು ದಿನದ ಮೊದಲಷ್ಟೇ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಭಾರತವು ಮಾತುಕತೆಗೆ ಹೆಚ್ಚಿನ ಇಚ್ಛೆಯನ್ನು ವ್ಯಕ್ತಪಡಿಸಿದರೆ ಪರಿಹಾರವೊಂದನ್ನು ಕಂಡುಕೊಳ್ಳಬಹುದು ಎಂದು ಹೇಳಿದ್ದರೂ ಶ್ರೀವಾಸ್ತವ ಅವರ ಈ ಹೇಳಿಕೆ ಹೊರಬಿದ್ದಿತ್ತು.
ಭಾರತವೂ ತನ್ನ ಮೇ 20ರ ಹೇಳಿಕೆಯಲ್ಲಿ ಮಾತುಕತೆಗಳಿಗೆ ಒತ್ತು ನೀಡಿತ್ತಾದರೂ ಉಭಯ ದೇಶಗಳ ನಡುವೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ಈಗಲೂ ಬಾಕಿಯಾಗಿವೆ.
ತನ್ಮಧ್ಯೆ ಕೋವಿಡ್-19ರ ವಿರುದ್ಧ ಹೋರಾಟದಲ್ಲಿ ನೇಪಾಳಕ್ಕೆ ಭಾರತವು ಒದಗಿಸಿರುವ ನೆರವನ್ನು ಶ್ರೀವಾಸ್ತವ ಪ್ರಮುಖವಾಗಿ ಬಿಂಬಿಸಿದ್ದಾರೆ. ‘ಪ್ಯಾರಾಸಿಟಮಲ್ ಮತ್ತು ಹೈಡ್ರಾಕ್ಸಿಕ್ಲೋರೊಕ್ವಿನ್, ಪರೀಕ್ಷಾ ಕಿಟ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ 25 ಟನ್‌ಗೂ ಅಧಿಕ ವೈದ್ಯಕೀಯ ನೆರವನ್ನು ನಾವು ನೇಪಾಳಕ್ಕೆ ಪೂರೈಸಿದ್ದೇವೆ. ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ನೇಪಾಳಿ ಪ್ರಜೆಗಳನ್ನು ತೆರವುಗೊಳಿಸಲೂ ಮಾನವೀಯ ನೆಲೆಯಲ್ಲಿ ನೆರವಾಗಿದ್ದೇವೆ. ಉಭಯ ದೇಶಗಳಲ್ಲಿ ಲಾಕ್‌ಡೌನ್ ಇದ್ದಾಗ್ಯೂ ನೇಪಾಳದೊಂದಿಗೆ ವ್ಯಾಪಾರ ಮತ್ತು ಅದಕ್ಕೆ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಯಾವುದೇ ವ್ಯತ್ಯಯವಾಗದಂತೆ ಭಾರತವು ನೋಡಿಕೊಂಡಿದೆ ’ಎಂದು ಅವರು ಹೇಳಿದರು.
ಮಸೂದೆಯನ್ನು ಈಗ ಅಂಗೀಕಾರಕ್ಕಾಗಿ ರಾಷ್ಟ್ರೀಯ ಅಸೆಂಬ್ಲಿ ಅಥವಾ ಮೇಲ್ಮನೆಗೆ ಕಳುಹಿಸಲಾಗುತ್ತದೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿಯು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದೆ. ಮಸೂದೆಗೆ ತಿದ್ದುಪಡಿಗಳೇನಾದರೂ ಇದ್ದರೆ ಮಂಡಿಸಲು ರಾಷ್ಟ್ರೀಯ ಅಸೆಂಬ್ಲಿಯು ಸಂಸದರಿಗೆ 72 ಗಂಟೆಗಳ ಕಾಲಾವಕಾಶವನ್ನು ನೀಡಬೇಕಾಗುತ್ತದೆ. ರಾಷ್ಟ್ರೀಯ ಅಸೆಂಬ್ಲಿಯು ಮಸೂದೆಯನ್ನು ಅಂಗೀಕರಿಸಿದ ಬಳಿಕ ಅದನ್ನು ರಾಷ್ಟ್ರಾಧ್ಯಕ್ಷರ ಅಂಕಿತಕ್ಕಾಗಿ ಸಲ್ಲಿಸಲಾಗುತ್ತದೆ ಮತ್ತು ಬಳಿಕ ಸಂವಿಧಾನದಲ್ಲಿ ಮಸೂದೆಯನ್ನು ಸೇರ್ಪಡೆಗೊಳಿಸಲಾಗುತ್ತದೆ.