×
Ad

ಟ್ರಂಪ್‌ರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ‘ಅಸ್ಥಿರ, ಅಪ್ರಬುದ್ಧ’: ಹೊಸ ಪುಸ್ತಕದಲ್ಲಿ ಮಾಜಿ ಭದ್ರತಾ ಸಲಹೆಗಾರ

Update: 2020-06-13 20:53 IST

ವಾಶಿಂಗ್ಟನ್, ಜೂ. 13: ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಪುಸ್ತಕವೊಂದನ್ನು ಬರೆದಿದ್ದು, ಅದರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ನಿರ್ಧಾರ ತೆಗೆದುಕೊಳ್ಳುವ ಅಸ್ಥಿರ ಹಾಗೂ ಅಪ್ರಬುದ್ಧ ಪ್ರಕ್ರಿಯೆ’ ಬಗ್ಗೆ ವಿವರಗಳನ್ನು ನೀಡಿದ್ದಾರೆ ಎಂದು ಪುಸ್ತಕದ ಪ್ರಕಾಶಕರು ಶುಕ್ರವಾರ ಹೇಳಿದ್ದಾರೆ.

ಜಾನ್ ಬೋಲ್ಟನ್ ಬರೆದಿರುವ ಪುಸ್ತಕ ‘ದ ರೂಮ್ ವೇರ್ ಇಟ್ ಹ್ಯಾಪನ್ಡ್: ಅ ವೈಟ್ ಹೌಸ್ ಮೆಮಾಯಿರ್’ ಜೂನ್ 23ರಂದು ಬಿಡುಗಡೆಯಾಗಲಿದೆ. ಆದರೆ, ಈ ಪುಸ್ತಕದ ಬಗ್ಗೆ ಶ್ವೇತಭವನವು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಪುಸ್ತಕದಲ್ಲಿ ರಹಸ್ಯ ಮಾಹಿತಿಯನ್ನೇನಾದರೂ ಬಹಿರಂಗಪಡಿಸಲಾಗಿದಯೇ ಎಂಬ ಬಗ್ಗೆ ಅಧಿಕಾರಿಗಳು ಬೋಲ್ಟನ್‌ರ ಪ್ರತಿನಿಧಿಗಳನ್ನು ವಿಚಾರಿಸುತ್ತಿದ್ದಾರೆ.

ವಿದೇಶ ನೀತಿಗೆ ಸಂಬಂಧಿಸಿ ಹಲವು ವಿಷಯಗಳಲ್ಲಿ ಟ್ರಂಪ್ ಮತ್ತು ಬೋಲ್ಟನ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಬಳಿಕ, ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬೋಲ್ಟನ್‌ರನ್ನು ಟ್ರಂಪ್ ಉಚ್ಚಾಟಿಸಿದ್ದರು.

ಚೀನಾ, ರಶ್ಯ, ಯುಕ್ರೇನ್, ಉತ್ತರ ಕೊರಿಯ, ಇರಾನ್, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಗಳೊಂದಿಗಿನ ಟ್ರಂಪ್‌ರ ವ್ಯವಹಾರಗಳ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ ಎಂದು ಪತ್ರಿಕಾ ಪ್ರಕಟನೆಯೊಂದರಲ್ಲಿ ಪ್ರಕಾಶನ ಸಂಸ್ಥೆ ಸೈಮನ್ ಆ್ಯಂಡ್ ಶಸ್ಟರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News