ಗಡಿ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಜ. ನರವಾಣೆ

Update: 2020-06-13 17:21 GMT

ಹೊಸದಿಲ್ಲಿ, ಜೂ.13: ಚೀನಾದೊಂದಿಗಿನ ನಮ್ಮ ಗಡಿಭಾಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಭಯ ದೇಶಗಳ ಹಿರಿಯ ಮಿಲಿಟರಿ ಕಮಾಂಡರ್‌ಗಳ ನಡುವೆ ನಡೆದ ಸರಣಿ ಸಭೆಗಳ ಫಲವಾಗಿ ಉದ್ವಿಗ್ನ ಪರಿಸ್ಥಿತಿ ಸಾಕಷ್ಟು ಕ್ಷೀಣಿಸಿದೆ ಮತ್ತು ಎರಡೂ ದೇಶಗಳ ನಡುವಿನ ವಿವಾದ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ.

ಚೀನಾ-ಭಾರತ ಸೇನೆಗಳ ಕಮಾಂಡರ್‌ಗಳ ಮಟ್ಟದ ಪ್ರಥಮ ಸಭೆ ಜೂನ್ 6ರಂದು ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಪ್ರದೇಶದಲ್ಲಿರುವ ಮಾಲ್ದೊ ಸೇನಾನೆಲೆಯಲ್ಲಿ ನಡೆದ ಬಳಿಕ ಸರಣಿ ಸಭೆಗಳು ನಡೆದಿವೆ. ಭಾರತ-ನೇಪಾಳಗಳ ಮಧ್ಯೆ ಉದ್ಭವಿಸಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಜ ನರವಾಣೆ, ನೇಪಾಳದೊಂದಿಗೆ ನಾವು ಸುದೀರ್ಘ ಸಮಯದಿಂದ ಸ್ನೇಹ ಸಂಬಂಧವನ್ನು ಹೊಂದಿದ್ದೇವೆ. ಉಭಯ ದೇಶಗಳ ಮಧ್ಯೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಪರ್ಕವಿದೆ. ಉಭಯ ದೇಶಗಳ ಜನರ ಮಧ್ಯೆ ಸದೃಢ ಸಂಪರ್ಕದ ಬೆಸುಗೆಯಿದೆ. ಈ ಸ್ನೇಹಸಂಬಂಧ ಮುಂದೆಯೂ ಹೀಗೆಯೇ ಇರಲಿದೆ ಎಂದರು.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ನರವಾಣೆ, ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಭದ್ರತಾ ಪಡೆಗಳ ನಡುವಿನ ಸಹಕಾರ ಮತ್ತು ಸಮನ್ವಯತೆಯಿಂದ ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆ ಬಹಳಷ್ಟು ಯಶಸ್ಸು ಪಡೆದಿದೆ. ಕಳೆದ ಸುಮಾರು 10 ದಿನಗಳಲ್ಲೇ 15 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಈ ಯಶಸ್ಸಿಗೆ ಸ್ಥಳೀಯರು ಉಗ್ರರ ಅಡಗುತಾಣ ಹಾಗೂ ಚಲನವಲನದ ಬಗ್ಗೆ ನೀಡುತ್ತಿರುವ ಮಾಹಿತಿಯೇ ಕಾರಣವಾಗಿದೆ. ಉಗ್ರರು ಮತ್ತು ಭಯೋತ್ಪಾದನೆಯಿಂದ ರಾಜ್ಯದ ಜನತೆ ಹತಾಶರಾಗಿದ್ದು ಈಗ ಅವರೂ ಶಾಂತಿ ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.

ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾಗಿದ್ದ ಜ ನರವಾಣೆ, ಗಡಿಭಾಗದಲ್ಲಿನ ಪರಿಸ್ಥಿತಿ, ಚೀನಾ-ಭಾರತದ ಮಧ್ಯೆ ಸೇನಾ ಕಮಾಂಡರ್‌ಗಳ ಮಟ್ಟದಲ್ಲಿ ನಡೆದ ಸರಣಿ ಸಭೆಯ ಬಳಿಕ ಲಡಾಕ್‌ನ ಕೆಲವು ಪ್ರದೇಶಗಳಿಂದ ಉಭಯ ಸೇನೆಗಳು ಹಿಂದೆ ಸರಿಯುತ್ತಿರುವ ಬಗ್ಗೆ ಅವರಿಗೆ ವಿವರಿಸಿದರು. ಈ ಸಂದರ್ಭ ವಾಯುಪಡೆ ಮತ್ತು ನೌಕಾಪಡೆ ಮುಖ್ಯಸ್ಥರು, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜತೆಗಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News