ಆಫ್ರಿಕಾ ವ್ಯಕ್ತಿಯನ್ನು ಉಲ್ಲೇಖಿಸಲು ‘ನೀಗ್ರೋ’ ಶಬ್ಧ ಬಳಕೆ: ಪಂಜಾಬ್ ಪೊಲೀಸರನ್ನು ತರಾಟೆಗೆತ್ತಿಕೊಂಡ ಹೈಕೋರ್ಟ್

Update: 2020-06-14 17:03 GMT

ಚಂಡಿಗಡ,ಜೂ.14: ಪೊಲೀಸ್ ದಾಖಲೆಗಳಲ್ಲಿ ಆಫ್ರಿಕಾದ ವ್ಯಕ್ತಿಯೋರ್ವನನ್ನು ಉಲ್ಲೇಖಿಸಲು ‘ನೀಗ್ರೋ’ ಶಬ್ದವನ್ನು ಬಳಸಿದ್ದಕ್ಕಾಗಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಪಂಜಾಬ್ ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದೆ.

ಆಫ್ರಿಕಾ ಮೂಲದ ಕಪ್ಪು ಜನರನ್ನು ಸಂಬೋಧಿಸಲು ‘ಕಾಲಾ’ ಅಥವಾ ‘ನಿಗ್ರೋ’ದಂತಹ ಅವಮಾನಕಾರಿ ಶಬ್ದಗಳ ಬಳಕೆಯು ಅತ್ಯಂತ ಅವಹೇಳನಕಾರಿಯಾಗಿದೆ ಮತ್ತು ಅಸ್ವೀಕಾರಾರ್ಹವಾಗಿದೆ ಎಂದು ಕಟುವಾದ ಶಬ್ದಗಳಿಂದ ಕೂಡಿರುವ ಜೂ.12ರ ತನ್ನ ಆದೇಶದಲ್ಲಿ ನ್ಯಾಯಾಲಯವು ಹೇಳಿದೆ.

 ಕರಿಯ ಜನರು ವಿದೇಶಗಳಲ್ಲಿ ಘನತೆ ಮತ್ತು ಗೌರವಗಳಿಗೆ ಅರ್ಹರಾಗಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ ಅರಿವು ಮೂಡಿಸಬೇಕು ಎಂದು ಮಾದಕ ದ್ರವ್ಯ ಪ್ರಕರಣದ ವಿಚಾರಣೆ ಸಂದರ್ಭ ತನ್ನ ಆದೇಶದಲ್ಲಿ ಹೇಳಿರುವ ನ್ಯಾ.ರಾಜೀವ ನಾರಾಯಣ ರೈನಾ ಅವರು,ಇಡೀ ವಿಷಯವನ್ನು ಪರಿಶೀಲಿಸುವಂತೆ ಮತ್ತು ಪ್ರಕರಣ ದಾಖಲೆಗಳಲ್ಲಿ ಕರಿಯ ಜನರನ್ನು ಉಲ್ಲೇಖಿಸುವಾಗ ‘ನಿಗ್ರೋ’ದಂತಹ ಅವಮಾನಕಾರಿ ಶಬ್ದಗಳನ್ನೆಂದೂ ಬಳಸದಂತೆ ಪೊಲೀಸ್ ಪಡೆಗೆ ಸೂಚನೆಗಳನ್ನು ಹೊರಡಿಸುವಂತೆ ಪಂಜಾಬ ಡಿಜಿಪಿಗೆ ನಿರ್ದೇಶ ನೀಡಿದ್ದಾರೆ.

 ದೈಹಿಕ ಲಕ್ಷಣಗಳ ಆಧಾರದಲ್ಲಿ ಇಂತಹ ಚಾರಿತ್ರ್ಯಹನನದಲ್ಲಿ ತೊಡಗುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ ನ್ಯಾ.ರಾಣಾ,ಪ್ರಕರಣದ ದಾಖಲೆಗಳಲ್ಲಿ ಆಫ್ರಿಕದ ವ್ಯಕ್ತಿಯನ್ನು ಉಲ್ಲೇಖಿಸುವಾಗ ‘ನಿಗ್ರೋ’ ಶಬ್ದವನ್ನು ಬಳಸಿದ್ದು ನೋಡಿ ತಾನು ದಿಗಿಲುಗೊಂಡಿದ್ದೇನೆ. ಇದು ವಿಶ್ವಾದ್ಯಂತ ಅವಮಾನಕಾರಿ ಶಬ್ಧವಾಗಿದ್ದು, ಅದನ್ನು ಯಾರೂ ಬಳಸುವ ಅಗತ್ಯವಿಲ್ಲ. ಪೊಲೀಸರಂತೂ ಬಳಸುವ ಹಾಗೆಯೇ ಇಲ್ಲ. ಪ್ರತಿಯೊಬ್ಬ ಕರಿಯ ವ್ಯಕ್ತಿಯೂ ಮಾದಕ ದ್ರವ್ಯಗಳ ಮಾರಾಟಗಾರನಾಗಿದ್ದಾನೆ ಮತ್ತು ಅವರನ್ನು ಹೀಗೆಯೇ ಉಲ್ಲೇಖಿಸಬೇಕು ಎಂದು ಪೊಲೀಸರು ಭಾವಿಸಿರುವಂತಿದೆ. ಇದೊಂದು ಭಯಂಕರ ಆಲೋಚನೆಯಾಗಿದೆ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಫ್ರಿಕಾದ ಜನರ ವಿರುದ್ಧ ಜನಾಂಗೀಯ ವಾದದ ಹಲವಾರು ಘಟನೆಗಳು ನಡೆದಿವೆ.

 2013 ಮತ್ತು 2014ರಲ್ಲಿ ತಾನು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಆಟವಾಡಿದ್ದಾಗ ತಂಡದ ಸದಸ್ಯರಿಂದ ಜನಾಂಗೀಯ ಟೀಕೆಗಳನ್ನು ಎದುರಿಸಿದ್ದೆ ಎಂದು ಮಾಜಿ ವೆಸ್ಟ್‌ಇಂಡೀಸ್ ಕ್ರಿಕೆಟ್ ಕ್ಯಾಪ್ಟನ್ ಡ್ಯಾರೆನ್ ಸಮಿ ಅವರು ಇತ್ತೀಚಿಗೆ ಬಹಿರಂಗಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News