ಒಡಿಶಾದ ಮಹಾನದಿಯಲ್ಲಿ ಮುಳುಗಿದ್ದ 500 ವರ್ಷ ಹಿಂದಿನ ಪ್ರಾಚೀನ ದೇವಸ್ಥಾನ ಪತ್ತೆ

Update: 2020-06-14 17:40 GMT

ಭುವನೇಶ್ವರ,ಜೂ.14: ಒಡಿಶಾದ ಮಹಾನದಿಯಲ್ಲಿ ಮುಳುಗಿದ್ದ ಪ್ರಾಚೀನ ದೇವಸ್ಥಾನವೊಂದನ್ನು ಪತ್ತೆ ಹಚ್ಚಲಾಗಿದೆ ಎಂದು ನದಿ ಕಣಿವೆಯಲ್ಲಿನ ಪಾರಂಪರಿಕ ನಿವೇಶನಗಳಲ್ಲಿ ದಾಖಲೀಕರಣ ಯೋಜನೆಯ ನೇತೃತ್ವ ವಹಿಸಿದ್ದ ತಜ್ಞರು ತಿಳಿಸಿದ್ದಾರೆ.

 ಸುಮಾರು 500 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ 60 ಅಡಿ ಎತ್ತರದ ದೇವಸ್ಥಾನ ಯೋಜನೆಯ ಅಂಗವಾಗಿ ಇತ್ತೀಚಿಗೆ ಕಟಕ್‌ನ ಪದ್ಮಾವತಿ ಪ್ರದೇಶದ ಬೈದೇಶ್ವರ ಬಳಿ ನಡೆಸಲಾಗಿದ್ದ ಕಾರ್ಯಾಚರಣೆ ಸಂದರ್ಭ ನದಿಯ ಮಧ್ಯಭಾಗದಲ್ಲಿ ಪತ್ತೆಯಾಗಿದೆೆ ಎಂದು ಒಡಿಶಾದಲ್ಲಿ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಐಎನ್‌ಟಿಎಸಿಎಚ್)ನ ಯೋಜನಾ ಸಂಯೋಜಕರಾಗಿರುವ ಅನಿಲ ಧೀರ್ ಅವರು ತಿಳಿಸಿದರು.

ಮಸ್ತಕದ ರಚನಾ ಶೈಲಿ ಮತ್ತು ನಿರ್ಮಾಣಕ್ಕೆ ಬಳಸಲಾದ ಸಾಮಗ್ರಿಗಳನ್ನು ನೋಡಿದರೆ ದೇವಸ್ಥಾನವು 15ನೇ ಶತಮಾನದ ಅಂತ್ಯ ಅಥವಾ 16ನೇ ಶತಮಾನದ ಆರಂಭಕ್ಕೆ ಸೇರಿರುವಂತೆ ಕಂಡುಬರುತ್ತಿದೆ. ಗೋಪಿನಾಥ ದೇವರ ಈ ದೇವಸ್ಥಾನದ ಸ್ಥಳಾಂತರ ಮತ್ತು ಮರುಸ್ಥಾಪನೆಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಐಎನ್‌ಟಿಎಸಿಎಚ್ ಭಾರತೀಯ ಪುರಾತತ್ವ ಸರ್ವೆ(ಎಎಸ್‌ಐ)ಗೆ ಶೀಘ್ರವೇ ಪತ್ರ ಬರೆಯಲಿದೆ ಎಂದರು.

ಐಎನ್‌ಟಿಎಸಿಎಚ್ ಈವರೆಗೆ ಮಹಾನದಿಯಲ್ಲಿ 65 ಪುರಾತನ ದೇವಸ್ಥಾನಗಳನ್ನು ಪತ್ತೆ ಹಚ್ಚಿದೆ ಎಂದ ಧೀರ್,ಹಿರಾಕುಡ್ ಜಲಾಶಯದಲ್ಲಿನ ಹಲವಾರು ದೇವಸ್ಥಾನಗಳನ್ನು ಸಹ ಕಳಚಿ ಮರುನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News