ಟ್ವೆಂಟಿ-20 ವಿಶ್ವಕಪ್, ಐಪಿಎಲ್‌ನಲ್ಲಿ ಆಡಲು ರೋಹಿತ್ ಸೈ

Update: 2020-06-15 05:19 GMT

ಮುಂಬೈ: ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಈ ವರ್ಷ ಟ್ವೆಂಟಿ-20 ವಿಶ್ವಕಪ್ ಮತ್ತು ಐಪಿಎಲ್‌ನಲ್ಲೂ ಆಡಲು ಬಯಸಿದ್ದಾರೆ.

 ಕೊರೋನ ವೈರಸ್ ಸೋಂಕು ಹರಡುತ್ತಿರುವ ಕಾರಣದಿಂದಾಗಿ ಎರಡೂ ಪಂದ್ಯಾವಳಿಗಳ ಪೈಕಿ ಒಂದು ಮಾತ್ರ ನಡೆಯುವ ಸಾಧ್ಯತೆ ಕಂಡು ಬರುತ್ತಿದ್ದರೂ, ರೋಹಿತ್ ಶರ್ಮಾ ಅವರು ಎರಡು ಟೂರ್ನಿಗಳು ನಡೆಯ ಬಹುದೆಂಬ ವಿಶ್ವಾಸದಲ್ಲಿದ್ದಾರೆ.

 ಆಸ್ಟ್ರೇಲಿಯದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನ ಭವಿಷ್ಯದ ಬಗ್ಗೆ ಐಸಿಸಿ ಇನ್ನೂ ತೀರ್ಮಾನಿಸಿಲ್ಲ, ಆದರೆ ಬಿಸಿಸಿಐ ಜನಪ್ರಿಯ ಮತ್ತು ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

   ಟ್ವೆಂಟಿ-20 ವಿಶ್ವಕಪ್‌ನ್ನು ಮುಂದೂಡಿದರೆ ಆ ಅವಧಿಯಲ್ಲಿ ಐಪಿಎಲ್ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ರೋಹಿತ್ ತಮ್ಮ ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಇನ್‌ಸ್ಟಾಗ್ರಾಮ್ ಚಾಟ್ ಸೆಷನ್‌ಗೆ ಚಾಲನೆ ನೀಡಿದ್ದಾರೆ.

 ಈ ವರ್ಷ ಯಾವ ಟೂರ್ನಿಗೆ ಆದ್ಯತೆ ನೀಡಬೇಕೆಂದು ಬಯಸಿರುವಿರಿ ಎಂದು ಕೇಳಿದಾಗ ರೋಹಿತ್ ಶರ್ಮಾ ಟ್ವೆಂಟಿ-20 ವಿಶ್ವಕಪ್ ಮತ್ತು ಐಪಿಎಲ್‌ನಲ್ಲಿ ಆಡುವುದಾಗಿ ಹೇಳಿದರು.

 ರೋಹಿತ್ ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಭಾರತದ ತಂಡಕ್ಕೆ ಆಸ್ಟ್ರೇಲಿಯದಲ್ಲಿ ಪಿಂಕ್ ಬಾಲ್ ಟೆಸ್ಟ್ ಸವಾಲಿನ ದ್ದಾಗಿದೆ ಎಂದು ಸ್ಟಾರ್ ಓಪನರ್ ಹೇಳಿದರು.

     ಡಿಸೆಂಬರ್ 3 ರಿಂದ ಬ್ರಿಸ್ಬೇನ್ ಗಬ್ಬಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನೊಂದಿಗೆ ಆತಿಥೇಯ ಆಸ್ಟ್ರೇಲಿಯದ ವಿರುದ್ಧ ಭಾರತ ನಾಲ್ಕು ಟೆಸ್ಟ್‌ಗಳ ಸರಣಿಯನ್ನು ಆರಂಭಿಸಲಿದೆ. ಎರಡನೇ ಟೆಸ್ಟ್ ಅಡಿಲೇಡ್ ಓವಲ್‌ನಲ್ಲಿ ಹಗಲು-ರಾತ್ರಿ ನಡೆಯಲಿದೆ.

  ರೋಹಿತ್ ಶರ್ಮಾರಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಒಂದೇ ಪದದಲ್ಲಿ ವರ್ಣಿಸುವಂತೆ ಕೇಳಿದಾಗ ಅವರನ್ನು ‘‘ಲೆಜೆಂಡ್’’ ಎಂದು ಬಣ್ಣಿಸಿದರು.

  ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಮತ್ತು ಇಂಗ್ಲೆಂಡ್‌ನ ಜೇಸನ್ ರಾಯ್ ಅವರ ಬ್ಯಾಟಿಂಗ್ ನೋಡಲು ಖುಷಿಯಾಗುತ್ತದೆ ಎಂದು ಭಾರತದ ಉಪನಾಯಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News