ಲಾ ಲಿಗಾ: ಗೆಲುವಿನ ಅಭಿಯಾನ ಆರಂಭಿಸಿದ ಮ್ಯಾಡ್ರಿಡ್

Update: 2020-06-15 18:02 GMT

ಮ್ಯಾಡ್ರಿಡ್, ಜೂ.15: ಕೊರೋನ ವೈರಸ್ ಸೋಂಕು ಕಾರಣದಿಂದಾಗಿ ಮೂರು ತಿಂಗಳ ಕಾಲ ಸ್ಥಗಿತಗೊಂಡಿದ್ದ ಲಾ ಲಿಗಾ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ರವಿವಾರ ಆಲ್ಫೆರ್ಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ನಡೆದ ಮೊದಲ ಸ್ಪರ್ಧಾತ್ಮಕ ಪಂದ್ಯದಲ್ಲಿ ಐಬಾರ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ.

ಟೋನಿ ಕ್ರೂಸ್ ಖಾಲಿ ಕ್ರೀಡಾಂಗಣದಲ್ಲಿ ನಾಲ್ಕನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ರಿಯಲ್ ಮ್ಯಾಡ್ರಿಡ್ ತಂಡದ ಗೋಲು ಖಾತೆ ತೆರೆದರು. ಆದರೆ ನಾಯಕ ಸೆರ್ಗಿಯೋ ರಾಮೋಸ್ 30ನೇ ನಿಮಿಷದಲ್ಲಿ ತಂಡದ ಗೋಲು ಸಂಖ್ಯೆಯನ್ನು 2ಕ್ಕೆ ಏರಿಸಿದರು. ಮಾರ್ಸೆಲೊ 37ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಮ್ಯಾಡ್ರಿಡ್ 3-0 ಮುನ್ನಡೆ ಸಾಧಿಸಿತು.

ದ್ವಿತಿಯಾರ್ಧದಲ್ಲಿ ರಿಯಲ್ ಹಾದಿ ಸರಾಗವಾಯಿತು. 60ನೇ ನಿಮಿಷದಲ್ಲಿ ಎದುರಾಳಿ ತಂಡದ ಪೆಡ್ರೊ ಬಿಗಾಸ್ ಗೋಲು ಗಳಿಸಿದರು. ರಿಯಲ್ ಮ್ಯಾಡ್ರಿಡ್ ಕೋಚ್ ಝೈನುದ್ದೀನ್ ಜಿದಾನೆ ಎಲ್ಲಾ ಐದು ಬದಲಿ ಆಟಗಾರರನ್ನು ಪಂದ್ಯದಲ್ಲಿ ಬಳಸಿಕೊಂಡರು. ಈ ಪಂದ್ಯದಲ್ಲಿ ಉಭಯ ತಂಡಗಳ ತಲಾ ಒಬ್ಬರಿಗೆ ಹಳದಿ ಕಾರ್ಡ್ ನ ದರ್ಶನವಾಗಿತ್ತು. ಮ್ಯಾಡ್ರಿಡ್ ಪರ 5 ಬಾರಿ ಗೋಲು ಗಳಿಸುವ ಯತ್ನ ನಡೆದಿತ್ತು. ಮೂರು ಬಾರಿ ಚೆಂಡು ಗುರಿ ತಲುಪಿತು. ಐಬಾರ್ ತಂಡದಿಂದ 6 ಬಾರಿ ಗೋಲು ಗಳಿಸುವ ಯತ್ನ ನಡೆದಿದ್ದರೂ, ಒಂದು ಬಾರಿ ಮಾತ್ರ ಎದುರಾಳಿ ತಂಡದ ಗೋಲ್‌ಕೀಪರ್ ಕಣ್ಣು ತಪ್ಪಿಸಲು ಸಾಧ್ಯವಾಯಿತು.

ಮಾಡ್ರಿಡ್ ಆಡಿರುವ 28 ಪಂದ್ಯಗಳ ಪೈಕಿ 17ನೇ ಗೆಲುವು ದಾಖಲಿಸಿದೆ. 59 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಬಾರ್ಸಿಲೋನಾಕ್ಕಿಂತ ಅಂಕಪಟ್ಟಿಯಲ್ಲಿ 2 ಅಂಕಗಳಷ್ಟು ಮುಂದಿದೆ.

59 ಪಂದ್ಯಗಳನ್ನು ಆಡಿರುವ ಬಾರ್ಸಿಲೋನಾ 19 ಗೆಲುವಿನೊಂದಿಗೆ 61 ಅಂಕ ಪಡೆದು ಅಗ್ರಸ್ಥಾನದಲ್ಲಿದೆ. ಶನಿವಾರ ಆರ್‌ಸಿಡಿ ಮಲ್ಲೋರ್ಕಾ ತಂಡನ್ನು ಬಾರ್ಸಿಲೋನಾ 4-0 ಗೋಲುಗಳಿಂದ ಸೋಲಿಸಿ ಅಗ್ರಸ್ಥಾನವನ್ನು ಉಳಿಸಿಕೊಂಡಿತ್ತು.

ಮ್ಯಾಡ್ರಿಡ್‌ನ ಗೆಲುವಿನ ಬಗ್ಗೆ ನಾಯಕ ರಾಮೋಸ್ ಸಂತಸ ವ್ಯಕ್ತಪಡಿಸಿದ್ದಾರೆ.

‘‘ಕೋವಿಡ್-19 ಕಾರಣದಿಂದಾಗಿ ಆಟಗಾರರಿಗೆ ಸವಾಲು ಎದುರಾಗಿತ್ತು. ಇದು ವಿಚಿತ್ರ ಸನ್ನಿವೇಶವಾಗಿದೆ, ಆದರೆ ಕೊನೆಗೂ ನಾವು ಹಿಂದಿರುಗಿದ್ದೇವೆ. ಪ್ರತಿಯೊಬ್ಬರಿಗೂ ಫುಟ್ಬಾಲ್ ಬಹಳ ಮುಖ್ಯ ಮತ್ತು ಮತ್ತೆ ಹುಲ್ಲಿನ ಮೇಲೆ ಹೆಜ್ಜೆ ಹಾಕುವಾಗ ಅಪಾರ ಸಂತಸ ನೀಡಿತು ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News