ಗುಜರಾತ್: 24 ಗಂಟೆಯಲ್ಲಿ ಎರಡು ಬಾರಿ ಭೂಕಂಪ

Update: 2020-06-15 18:16 GMT

ಗಾಂಧೀನಗರ, ಜೂ.15: ಗುಜರಾತ್‌ನ ರಾಜ್‌ ಕೋಟ್ ‌ನಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಮಧ್ಯಾಹ್ನ ಭೂಕಂಪವಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿನಷ್ಟವಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 ರವಿವಾರ ರಾತ್ರಿ 8:13ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯನ್ನು ಹೊಂದಿದ್ದು, ರಾಜ್‌ಕೋಟ್‌ನ 118 ಕಿ.ಮೀ ವಾಯುವ್ಯದಲ್ಲಿ ಕೇಂದ್ರೀಕೃತವಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಟಣೆ ತಿಳಿಸಿದೆ.

ಸೋಮವಾರ ಮಧ್ಯಾಹ್ನ 12:57ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯನ್ನು ಹೊಂದಿದ್ದು, ರಾಜ್‌ಕೋಟ್‌ನ 82 ಕಿ.ಮೀ ವಾಯವ್ಯದಲ್ಲಿ ಕೇಂದ್ರೀಕೃತವಾಗಿತ್ತು. ಸೌರಾಷ್ಟ್ರ ಮತ್ತು ಅಹ್ಮದಾಬಾದ್ ಸೇರಿದಂತೆ ಉತ್ತರ ಗುಜರಾತ್ ವಲಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಲಘು ಭೂಕಂಪವಾಗಿದ್ದರಿಂದ ಯಾವುದೇ ಪ್ರಾಣಹಾನಿ, ಆಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ ಎಂದು ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ. ಕಚ್, ರಾಜ್‌ಕೋಟ್ ಮತ್ತು ಪಟಾನ್ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್ ರೂಪಾನಿ , ಪರಿಸ್ಥಿತಿಯ ಪರಾಮರ್ಶೆ ನಡೆಸಿ ಅಗತ್ಯಬಿದ್ದರೆ ವಿಪತ್ತು ನಿರ್ವಹಣಾ ದಳದ ಸಹಾಯ ಪಡೆಯುವಂತೆ ಸೂಚಿಸಿದರು.

ಈ ಮಧ್ಯೆ, ಸೋಮವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಕತ್ರಾ ಪ್ರದೇಶದಲ್ಲಿ ನಾಲ್ಕು ಬಾರಿ ಭೂಕಂಪನವಾಗಿದೆ . ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News