ಕೊರೋನ ಜತೆ ಜನರ ಮೇಲೆ ತ್ಯಾಜ್ಯ ತೆರಿಗೆ ಹೊರೆ: ಮನಪಾ ಆಡಳಿತ ವಿರುದ್ಧ ವಿಪಕ್ಷ ಆರೋಪ

Update: 2020-06-16 07:45 GMT

ಮಂಗಳೂರು, ಜೂ.16: ಕೊರೋನ ಭೀತಿಯ ಜತೆ ಲಾಕ್‌ಡೌನ್ ಸಂಕಷ್ಟದಿಂದ ಕಂಗೆಟ್ಟಿರುವ ನಗರದ ಜನತೆ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಆಡಳಿತವು ತ್ಯಾಜ್ಯ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಹೊರೆ ಹೇರಿದೆ ಎಂದು ಮನಪಾ ವಿಪಕ್ಷ ಆರೋಪಿಸಿದೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಆರೋಪ ಮಾಡಿದ ವಿಪಕ್ಷ ನಾಯಕ ಅಬ್ದುಲ್ ರವೂಫ್, ಮನಪಾದಲ್ಲಿ 2015-16ರಲ್ಲಿ ಮರು ಪರಿಶೀಲನೆ ಮಾಡಿ ಜಾರಿಗೊಳಿಸಲಾಗಿದ್ದ 500 ಚದರ ಅಡಿಗೆ ವಾರ್ಷಿಕ 180 ರೂ.ಗಳಂತೆ ನಿಗದಿಪಡಿಸಲಾಗಿದ್ದ ತ್ಯಾಜ್ಯ ತೆರಿಗೆಯನ್ನು ಎಪ್ರಿಲ್‌ನಿಂದ 600 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದು ಶೇ.231ರಷ್ಟು ಏರಿಕೆಯಾಗಿದೆ ಎಂದರು. ಕೊರೋನ ಲಾಕ್‌ಡೌನ್‌ನಿಂದ ಆರ್ಥಿಕ ವ್ಯವಹಾರಗಳು ಸ್ಥಗಿತವಾಗಿದ್ದು, ಸಂಕಷ್ಟದಲ್ಲಿರುವ ಸಂದರ್ಭ ತೆರಿಗೆ ವಿನಾಯಿತಿ ನೀಡುವ ಮೂಲಕ ಜನರಿಗೆ ಸಹಕಾರ ನೀಡಬೇಕಾಗಿದ್ದ ಮನಪಾ ಆಡಳಿತ ಕೊರೋನ ನೆಪವೊಡ್ಡಿ ಅದರ ಲಾಭ ಪಡೆಯುತ್ತಿರುವುದು ಖಂಡನೀಯ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮನಪಾ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ವಿಪಕ್ಷ ನಾಯಕ ಎಚ್ಚರಿಸಿದ್ದಾರೆ.

ತ್ಯಾಜ್ಯ ತೆರಿಗೆ 2013-14ರಲ್ಲಿ ಮನಪಾದಲ್ಲಿ ಜಾರಿಗೊಳಿಸಲಾಯಿತು. ಅದರಂತೆ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿ ಮೂಲಕ ಕಸ ವಿಲೇವಾರಿಗೆ ಗುತ್ತಿಗೆ ನೀಡಲಾಗಿದೆ. ಕಂಪೆನಿಗೆ ಮಾಸಿಕ ಹಣ ಪಾವತಿಗೆ ನಿಗದಿಪಡಿಸಲಾಗಿದ್ದು, ಪಾಲಿಕೆಗೆ ಇದು ಹೊರೆಯಾಗುವ ದೃಷ್ಟಿಯಿಂದ ತೆರಿಗೆ ಪಾವತಿದಾರರಿಂದ ಕಸ ತೆರಿಗೆ ವಿಧಿಸಲಾಯಿತು. ಅದರಂತೆ 2015-16ರಲ್ಲಿ 500 ಚದರ ಅಡಿ ವ್ಯಾಪ್ತಿಯವರೆಗಿನ ಆಸ್ತಿ ತೆರಿಗೆಯ ಜತೆಗೆ ಮಾಸಿಕ 30 ರೂ.ನಂತೆ ವಾರ್ಷಿಕ 360 ರೂ. ತ್ಯಾಜ್ಯ ತೆರಿಗೆ ನಿಗದಿಯಾಗಿತ್ತು. ಸಾರ್ವಜನಿಕರಿಂದ ಅದಕ್ಕೆ ವಿರೋಧ ವ್ಯಕ್ತವಾದಾಗ ಅದನ್ನು ಮಾಸಿಕ 15 ರೂ.ಗಳಿಗೆ ನಿಗದಿಪಡಿಸಿ ಸಂಗ್ರಹ ಮಾಡಲಾಗುತ್ತಿತ್ತು. 500 ಚದರ ಅಡಿಗಿಂತ ಮೇಲ್ಪಟ್ಟ ವಿಸ್ತೀರ್ಣದ ಆಸ್ತಿ ತೆರಿಗೆ ಮೇಲೆ ವಿಭಿನ್ನ ದರ ಹಾಕಿ ಕಳೆದ ವರ್ಷದವರೆಗೂ ತ್ಯಾಜ್ಯ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ ಏಕಾಏಕಿ ಅದೂ ಕೊರೋನ ಸಂಕಷ್ಟದ ನಡುವೆಯೇ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ತೆರಿಗೆ ಏರಿಕೆ ಮಾಡಲಾಗಿದೆ. ಸದ್ಯ ಈ ತೆರಿಗೆ ವಸೂಲನ್ನು ನಿಲ್ಲಿಸಬೇಕು. ಈಗಾಗಲೇ ಪಾವತಿಸಿದವರಿಗೆ ಮುಂದಿನ ಪಾವತಿಗೆ ಸರಿತೂಗಿಸಬೇಕು. ಇದೇವೇಳೆ ನೀರಿನ ದರದಲ್ಲೂ ಏರಿಕೆ ಮಾಡಲಾಗಿದ್ದು, ಇದನ್ನೂ ಲಾಕ್‌ಡೌನ್ ಸಂದರ್ಭದಲ್ಲಿ 3 ತಿಂಗಳ ದರವನ್ನು ಮನ್ನಾ ಮಾಡುವಂತೆ ಪಾಲಿಕೆ ಆಡಳಿತವನ್ನು ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ನೀರಿನ ಅದಾಲತ್ ಮತ್ತೆ ಮುಂದುವರಿಸಿ
ನೀರಿನ ದರದಲ್ಲೂ ಭಾರೀ ಏರಿಕೆ ಮಾಡಲಾಗಿರುವ ಕುರಿತಂತೆ ವಿಪಕ್ಷ ವೌನವಾಗಿರುವುದೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮನಪಾ ಹಿರಿಯ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ, ಈ ಬಗ್ಗೆ ಆಡಳಿತದ ಗಮನ ಸೆಳೆಯಲಾಗಿದೆ. ಈ ಹಿಂದೆ ನೀರಿನ ಬಿಲ್‌ನಲ್ಲಿ ಆಗುವ ಲೋಪದೋಷಗಳು, ವ್ಯತ್ಯಾಸಗಳ ಕುರಿತಂತೆ ಅದಾಲತ್ ನಡೆಸಿ ಬಗೆಹರಿಸಲಾಗುತ್ತಿತ್ತು. ಇದೀಗ ಕೊರೋನ ನೆಪದಲ್ಲಿ ನೀರಿನ ಅದಾಲತ್ ಮಾಡುತ್ತಿಲ್ಲ. ಜನರಿಗೆ ಅತೀ ಅಗತ್ಯವಾಗಿರುವುದರಿಂದ ಮತ್ತೆ ನೀರಿನ ಅದಾಲತ್ ನಡೆಸಿ ಜನರಿಗೆ ಸ್ಪಂದಿಸಬೇಕು ಎಂದು ಅವರು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಎ.ಸಿ.ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ಭಾಸ್ಕರ ಕೆ., ನವೀನ್ ಡಿಸೋಜ, ಅನಿಲ್ ಕುಮಾರ್, ಅಶ್ರಫ್, ಸಂಶುದ್ದೀನ್, ಝೀನತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News