ಪಶ್ಚಿಮ ಘಟ್ಟದಲ್ಲಿ ಎನ್‌ಇಸಿಎಫ್‌ನಿಂದ ಮತ್ತೆ ಗಿಡ ನೆಡುವ ಕಾರ್ಯಾರಂಭ

Update: 2020-06-16 08:37 GMT

ಮಂಗಳೂರು, ಜೂ.16: ಕೊರೋನ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿರುವ ಜತೆಯಲ್ಲೇ ಈ ಸೋಂಕಿಗೆ ಪ್ರಕೃತಿಯ ಅವಗಣನೆ, ಪ್ರಾಕೃತಿಕ ಅಸಮತೋನವೂ ಕಾರಣವೆನ್ನುವ ವಾದವೂ ಇದೆ. ಇಂತಹ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸಿ ಸಂರಕ್ಷಿಸುವ ಕುರಿತಂತೆ ಜನಜಾಗೃತಿ ಕಾರ್ಯವನ್ನು ಮಾಡುತ್ತಿರುವ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಹಸಿರನ್ನು ಹೆಚ್ಚಿಸುವ ತನ್ನ ಪ್ರಯತ್ನವನ್ನು ಮತ್ತೆ ಮುಂದುವರಿಸಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ತಮ್ಮ ತಂಡದ ಸದಸ್ಯರೊಂದಿಗೆ ಗಿಡಗಳನ್ನು ನೆಟ್ಟು ಪಶ್ಚಿಮ ಘಟ್ಟದ ಹಸುರೀಕರಣಕ್ಕೆ ಎನ್‌ಇಸಿಎಫ್ ತಂಡ ಒತ್ತು ನೀಡಿದೆ. ಎನ್‌ಇಸಿಎಫ್‌ನ ಈ ವರ್ಷದ ಕಾರ್ಯಕ್ರಮದ ಅಂಗವಾಗಿ ಪ್ರತಿ ರವಿವಾರ ಮುಂದಿನ ಎರಡು ತಿಂಗಳ ಕಾಲ ಹಣ್ಣು ಹಂಪಲಿನ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದೆ.

ಜೂನ್ 14ರಂದು ಒಕ್ಕೂಟದ 30 ಸದಸ್ಯರ ತಂಡ ಕುತ್ತಾರು ಬಳಿಯ ಆಶ್ರದ ಸಮೀಪ 140 ಹಣ್ಣು ಹಂಪಲಿನ ಗಿಡಗಳನ್ನು ನೆಟ್ಟಿದ್ದಾರೆ. ಜೂನ್ 21ರಂದು ರವಿವಾರ ಎನ್‌ಇಸಿಎಫ್‌ನ ಸದಸ್ಯರು ಸೇರಿದಂತೆ 45 ಮಂದಿ ಮೂಡುಬಿದಿರೆಯ ರೆಂಜಾಲ ಅರಣ್ಯ ಪ್ರದೇಶಲ್ಲಿ 250 ಗಿಡಗಳನ್ನು ನೆಡಲಿದ್ದಾರೆ. ಬಳಿಕ ಶಿಶಿಲ ಮತ್ತು ಇತರ ಪ್ರದೇಶಗಳಲ್ಲಿ ಈ ಗಿಡ ನೆಡುವ ಕಾಯಕ ಪರಿಸರ ಪ್ರೇಮಿಗಳಿಂದ ನಡೆಯಲಿದೆ.

‘‘ಕಳೆದ ವರ್ಷ ನಾವು ರೆಂಜಲದಲ್ಲಿ ಸುಮಾರು 500ರಷ್ಟು ಗಿಡಗಳನ್ನು ನೆಟ್ಟಿದ್ದೇವೆ. ಅದರಲ್ಲಿ ಶೇ. 75ರಷ್ಟು ಗಿಡಗಳು ಉಳಿದಿದ್ದು, ಅವುಗಳು ಬೆಳೆದಿವೆ. ಬೇಸಿಗೆಯಲ್ಲಿ ನಮ್ಮ ತಂಡದ ಸದಸ್ಯರು ಅವುಗಳಿಗೆ ನೀರುಣಿಸಿ ಪೋಷಿಸುವ ಕಾರ್ಯ ಮಾಡುತ್ತಿದಾರೆ’’ ಎನ್ನುತ್ತಾರೆ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ.

‘‘ಪಶ್ಚಿಮ ಘಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾವು 6000ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದೇವೆ. ಈ ವರ್ಷ ಕೊರೋನ ಸೋಂಕಿನ ಹಾವಳಿಯಿಂದಾಗಿ ವಿದ್ಯಾರ್ಥಿಗಳನ್ನು ಈ ಕಾರ್ಯದಲ್ಲಿ ಒಗ್ಗೂಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈ ವರ್ಷ ನಮ್ಮ ಖಾಸಗಿ ವಾಹನಗಳಲ್ಲಿಯೇ ನಾವು ಪ್ರಯಾಣಿಸುತ್ತಿದ್ದು, ನಿಗದಿಪಡಿಸಿದ ಮೀಸಲು ಅರಣ್ಯ ಪ್ರದೇಶಗಳಲ್ಲಿ ಗಿಡು ನೆಡುವ ಕಾರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಈ ಕಾರ್ಯದಲ್ಲಿ ಮಾಸ್ಕ್ ಹಾಕಿಕೊಂಡು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯವನ್ನು ಕೂಡಾ ಪಾಲಿಸುತ್ತಿದ್ದೇವೆ’’ ಎನ್ನುತ್ತಾರೆ ಶಶಿಧರ ಶೆಟ್ಟಿ.

‘‘ನಮ್ಮ ಈ ಕಾರ್ಯದಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕೆಲವೊಂದು ಸ್ಥಳಗಳನ್ನು ಗುರುತಿಸಿಕೊಂಡಿದ್ದೇವೆ. ಅರಣ್ಯ ಇಲಾಖೆಯು ನಮಗೆ ಮಾವು, ಹಲಸು, ಚೆರಿ, ಪುನರ್ಪುಳಿ ಮೊದಲಾದ ಹಣ್ಣು ಹಂಪಲಿನ ಗಿಡಗಳನ್ನು ನೀಡಿ ಸಹಕರಿಸುತ್ತಿದೆ. ನೆಟ್ಟ ಗಿಡದ ನಿರ್ವಹಣೆ ಮಾಡಲು ಸಾಧ್ಯವಾಗುವಲ್ಲಿ ಮಾತ್ರವೇ ನಾವು ಗಿಡಗಳನ್ನು ನೆಡುತ್ತಿದ್ದೇವೆ. ಪಶ್ಚಿಮ ಘಟ್ಟಗಳ ಸುತ್ತಮುತ್ತ ಹಸಿರೀಕರಣವನ್ನು ಹೆಚ್ಚಿಸುವ ಕುರಿತಂತೆ ಜನರಿಗೆ ಜಾಗೃತಿ ಮೂಡಿಸುವುದು ಕೂಡಾ ನಮ್ಮ ಈ ಪ್ರಯತ್ನದ ಉದ್ದೇಶ’’ ಎಂದವರು ಹೇಳುತ್ತಾರೆ.

‘‘ಈ ರೀತಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸುವುದು. ಅವುಗಳಿಗೂ ಆಹಾರ ಲಭ್ಯವಾಗುವಂತೆ ಮಾಡುವ ಉದ್ದೇಶವೂ ಇದಾಗಿದೆ. ಅರಣ್ಯದೊಳಗೆ ಹಣ್ಣು ಹಂಪಲುಗಳ ಮರ ಗಿಡಗಳು ನಾಶವಾಗುತ್ತಿರುವುದರಿಂದ ಸಸ್ಯಾಹಾರಿ ಕಾಡು ಪ್ರಾಣಿಗಳು ತೋಟ ಗದ್ದೆಗಳಿಗೆ ದಾಳಿ ಮಾಡುವಂತಹ ಪ್ರಸಂಗಗಳೂ ನಡೆಯುತ್ತಿವೆ. ಅವುಗಳಿಗೂ ಸಾಕಷ್ಟು ಆಹಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕಾಗಿದೆ’’ ಎಂದು ಅಭಿಪ್ರಾಯಿಸುತ್ತಾರೆ ಶಶಿಧರ ಶೆಟ್ಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News