‘ಅವರು ಕ್ರಿಮಿನಲ್‌ಗಳಲ್ಲ’: ತಬ್ಲೀಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ 31 ವಿದೇಶಿಯರಿಗೆ ಜಾಮೀನು ನೀಡಿದ ಹೈಕೋರ್ಟ್

Update: 2020-06-16 15:45 GMT

ಹೊಸದಿಲ್ಲಿ,ಜೂ.16: ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ತಬ್ಲೀಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ವಿದೇಶಿಯರನ್ನು ‘ತಬ್ಲೀಗಿಗಳು’ ಎಂದು ಸಾಮೂಹಿಕವಾಗಿ ವಿಷಯೀಕರಿಸುವ ವಿರುದ್ಧ ಮದ್ರಾಸ್ ಉಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ.

 ಕೋವಿಡ್-19 ಲಾಕ್‌ಡೌನ್ ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಸ್ಥಳೀಯ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ 31 ವಿದೇಶಿಯರಿಗೆ ಜೂನ್ 12ರಂದು ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ಅವರು ಈ ಎಚ್ಚರಿಕೆಯನ್ನು ನೀಡಿದರು.

 “ಅವರು ಸಾಮಾನ್ಯ ಮನುಷ್ಯರಾಗಿದ್ದಾರೆ. ಅವರೀಗ ಪರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅರ್ಜಿದಾರರು ಧಾರ್ಮಿಕ ಆದರ್ಶವಾದದಿಂದ ಪ್ರೇರಿತಗೊಂಡು ಇಲ್ಲಿಗೆ ಬಂದಿದ್ದರು. ಆದರೆ ಅವರ ಅಭಿಯಾನವು ದಾರಿ ತಪ್ಪಿದೆ. ಅವರೀಗ ತಮ್ಮ ಕುಟುಂಬಗಳ ಬಳಿ ಮರಳಲು ಕಾತುರರಾಗಿದ್ದಾರೆ” ಎಂದು ನ್ಯಾಯಾಲಯವು ತನ್ನ ಜಾಮೀನು ಆದೇಶದಲ್ಲಿ ಹೇಳಿದೆ.

ಸಂವಿಧಾನದ ವಿಧಿ 21ರಡಿ ಜಾಮೀನು ಪಡೆಯಲು ಅವರು ಅರ್ಹರಾಗಿದ್ದಾರೆ ಮತ್ತು ಕಾನೂನು ಕಲಾಪಗಳು ಪೂರ್ಣಗೊಳ್ಳುವವರೆಗೆ ಅವರು ಭಾರತದಲ್ಲಿ ಜೈಲಿನಂತಹ ಸ್ಥಿತಿಯಲ್ಲಿ ಇರಬೇಕೆಂದು ಹೇಳುವುದು ಪ್ರಮಾಣಾನುಗುಣತೆ ಮತ್ತು ನ್ಯಾಯಪರತೆಯ ಸಾರಾಸಗಟು ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ತಿಳಿಸಿತು.

ಅರ್ಜಿದಾರರನ್ನು ‘ತಬ್ಲೀಗಿಗಳು’ಎಂದು ಕರೆಯುವುದರಿಂದ ದೂರವುಳಿದ ನ್ಯಾ.ಸ್ವಾಮಿನಾಥನ್ ಅವರು ಇಂತಹ ವರ್ಗೀಕರಣವು ಗಂಭೀರ ಅಪಾಯಗಳಿಗೆ ಕಾರಣವಾಗುತ್ತದೆ. ಅರ್ಜಿದಾರರು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕ್ರಿಮಿನಲ್‌ಗಳಂತೆ ಕಾಣಲಾಗದು ಎಂದರು.

ಅರ್ಜಿದಾರರು ಕೊರೋನ ವೈರಸ್ ಹರಡುವಿಕೆಯಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದಕ್ಕೆ ಈವರೆಗೆ ಯಾವುದೇ ಸಾಕ್ಷ್ಯಾಧಾರವನ್ನು ಮುಂದಿರಿಸಲಾಗಿಲ್ಲ ಎಂದು ನ್ಯಾಯಾಲಯವು ಬೆಟ್ಟುಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News