ಅಮೆರಿಕ: ಹೈಡಾಕ್ಸಿಕ್ಲೋರೋಕ್ವಿನ್‌ಗೆ ನೀಡಿದ್ದ ಅನುಮತಿ ಹಿಂದಕ್ಕೆ ಪಡೆದ ಔಷಧ ಇಲಾಖೆ

Update: 2020-06-16 16:13 GMT

ವಾಶಿಂಗ್ಟನ್, ಜೂ. 16: ತುರ್ತು ಸಂದರ್ಭದಲ್ಲಿ ಕೋವಿಡ್-19 ಚಿಕಿತ್ಸೆಯಲ್ಲಿ ಮಲೇರಿಯ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಲು ನೀಡಿರುವ ಅನುಮೋದನೆಯನ್ನು ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ ಇಲಾಖೆ ಸೋಮವಾರ ಹಿಂದಕ್ಕೆ ಪಡೆದುಕೊಂಡಿದೆ.

ಹೊಸ ಪುರಾವೆಗಳ ಆಧಾರದಲ್ಲಿ, ನೋವೆಲ್-ಕೊರೋನ ವೈರಸ್‌ನ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅದಕ್ಕೆ ಸಂಬಂಧಿಸಿದ ಇನ್ನೊಂದು ಔಷಧ ಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಹುದು ಎಂದು ಭಾವಿಸುವುದು ಇನ್ನು ಮುಂದೆ ಕಾರ್ಯಸಾಧುವಲ್ಲ ಎಂದು ಇಲಾಖೆ ತಿಳಿಸಿದೆ.

ಈ ಔಷಧಗಳು ಗಿಲಿಯಡ್ ಸಯನ್ಸಸ್ ಇಂಕ್‌ನ ವೈರಸ್ ನಿರೋಧಕ ಔಷಧಿ ರೆಮ್‌ಡೆಸಿವಿರ್‌ನೊಂದಿಗೆ ಹಸ್ತಕ್ಷೇಪ ಮಾಡುವುದು ಪ್ರಯೋಗಾಲಯಗಳಲ್ಲಿ ನಡೆಸಿದ ಅಧ್ಯಯನಗಳಿಂದ ತಿಳಿದುಬಂದಿದೆ ಎಂಬುದಾಗಿಯೂ ಅದು ಎಚ್ಚರಿಸಿದೆ. ಕ್ಲಿನಿಕಲ್ ಪ್ರಯೋಗಗಳಲ್ಲಿ ಕೋವಿಡ್-19 ರೋಗದ ವಿರುದ್ಧ ಪರಿಣಾಮಕಾರಿ ಎಂಬುದಾಗಿ ಸಾಬೀತಾಗಿರುವ ಏಕೈಕ ಔಷಧ ರೆಮ್‌ಡೆಸಿವಿರ್ ಆಗಿದೆ.

ಡೊನಾಲ್ಡ್ ಟ್ರಂಪ್ ಆಕ್ರೋಶ

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಪ್ರಯೋಜನವನ್ನು ಪತ್ತೆಹಚ್ಚಲು ಅಮೆರಿಕದ ಸಂಸ್ಥೆಗಳಿಗೆ ಮಾತ್ರ ಸಾಧ್ಯವಾಗಿಲ್ಲ ಎಂಬುದಾಗಿ ಆಹಾರ ಮತ್ತು ಔಷಧಿ ಆಡಳಿತ ಇಲಾಖೆಯ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಕಿಡಿಗಾರಿದ್ದಾರೆ.

‘‘ನಾನು ಆ ಮಾತ್ರೆಗಳನ್ನು ತೆಗೆದುಕೊಂಡೆ ಹಾಗೂ ಅದನ್ನು ತೆಗೆದುಕೊಂಡ ಬಳಿಕ ನನಗೆ ಒಳ್ಳೆಯದಾಗಿದೆ. ಅದು ಪರಿಣಾಮ ಬೀರಿದೆಯೇ ಎನ್ನುವುದು ನನಗೆ ಗೊತ್ತಿಲ್ಲ, ಆದರೆ ಅದು ಖಂಡಿತವಾಗಿಯೂ ನನಗೆ ಹಾನಿ ಮಾಡಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News