ಮತ್ತೆ ಕೊರೋನ ವೈರಸ್ ಭೀತಿ: ಬೀಜಿಂಗ್‌ನಲ್ಲಿ 1,200ಕ್ಕೂ ಅಧಿಕ ವಿಮಾನ ಹಾರಾಟ ರದ್ದು
ಬೀಜಿಂಗ್(ಚೀನಾ),ಜೂ.17: ನೂತನ ಕೊರೋನ ವೈರಸ್‌ನ್ನು ನಿಯಂತ್ರಿಸಲು ಮುಂದಾಗಿರುವ ಚೀನಾ ರಾಜಧಾನಿ ಬೀಜಿಂಗ್‌ನ ಅಧಿಕಾರಿಗಳು ಬುಧವಾರ ಬೀಜಿಂಗ್ ಏರ್‌ಪೋರ್ಟ್‌ನಲ್ಲಿ 1,200ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಪಡಿಸಿದ್ದಲ್ಲದೆ,ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದೆ.
ನಗರದಲ್ಲಿ ಬುಧವಾರ ಹೊಸತಾಗಿ 31 ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಸಂಪೂರ್ಣ ನಿಯಂತ್ರಕ್ಕೆ ಬಂದಿದ್ದ ಕೊರೋನ ವೈರಸ್ ಸೋಂಕಿನ ಎರಡನೇ ಅಲೆ ಏಳುವ ಭೀತಿಯ ಹಿನ್ನೆಲೆಯಲ್ಲಿ ಬೀಜಿಂಗ್ ನಗರವನ್ನು ತೊರೆಯದಂತೆ ಅಧಿಕಾರಿಗಳು ನಿವಾಸಿಗಳಲ್ಲಿ ಕೋರಿದ್ದಾರೆ. ಬುಧವಾರ ಬೆಳಗ್ಗೆ ನಿಗದಿತ 1,255 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ 'ಪೀಪಲ್ಸ್ ಡೈಲಿ' ವರದಿ ಮಾಡಿದೆ.
ಏತನ್ಮಧ್ಯೆ ಎಲ್ಲ ಪ್ರಾಂತ್ಯಗಳು ಬೀಜಿಂಗ್‌ನಿಂದ ಪ್ರಯಾಣಿಕರನ್ನು ಪ್ರತ್ಯೇಕಿಸುತ್ತಿದೆ. ಮತ್ತೆ ತೆರೆದಿರುವ ಎಲ್ಲ ಶಾಲೆಗಳನ್ನು ಮತ್ತೊಮ್ಮೆ ಮುಚ್ಚುವಂತೆ ತಿಳಿಸಲಾಗಿದ್ದು, ಆನ್‌ಲೈನ್ ತರಗತಿಗಳಿಗೆ ಮರಳುವಂತೆ ಆದೇಶಿಸಲಾಗಿದೆ.