ಸೈನಿಕರ ಘರ್ಷಣೆಗೆ ಹೆಚ್ಚಿನ ಮಹತ್ವ ನೀಡದ ಚೀನಾ ಮಾಧ್ಯಮಗಳು: ಸಾವು-ನೋವಿನ ಬಗ್ಗೆಯೂ ಮೌನ
ಬೀಜಿಂಗ್, ಜೂ. 17: ಭಾರತ ಮತ್ತು ಚೀನಾ ಸೈನಿಕರ ನಡುವೆ ಗಡಿಯಲ್ಲಿ ನಡೆದಿರುವ ಭೀಕರ ಘರ್ಷಣೆಗೆ ಚೀನಾದ ಸರಕಾರಿ ಮಾಧ್ಯಮಗಳು ಬುಧವಾರ ಹೆಚ್ಚಿನ ಮಹತ್ವವನ್ನು ನೀಡಿಲ್ಲ ಹಾಗೂ ಚೀನಾ ಸೈನಿಕರ ಸಾವು-ನೋವಿನ ಬಗ್ಗೆಯೂ ಏನೂ ಹೇಳಿಲ್ಲ.
ಲಡಾಖ್‌ನಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಸೋಮವಾರ ಸಂಭವಿಸಿದ ‘ಹಿಂಸಾತ್ಮಕ ಮುಖಾಮುಖಿ’ಯಲ್ಲಿ ತನ್ನ 20 ಸೈನಿಕರು ಮೃತಪಟ್ಟಿದ್ದಾರೆ ಎಂಬುದಾಗಿ ಭಾರತೀಯ ಸೇನೆ ಮಂಗಳವಾರ ತಿಳಿಸಿದೆ. ಎರಡೂ ಕಡೆಗಳಳ್ಲಿ ಸಾವು-ನೋವು ಸಂಭವಿಸಿದೆ ಎಂದು ಅದು ಹೇಳಿದೆ.
ಚೀನಾ ಸೈನಿಕರಲ್ಲೂ ಸಾವು-ನೋವು ಸಂಭವಿಸಿದೆ ಎಂಬುದಾಗಿ ಚೀನಾದ ರಕ್ಷಣಾ ಸಚಿವಾಲಯ ಮಂಗಳವಾರ ರಾತ್ರಿ ಹೇಳಿದೆ. ಆದರೆ, ಯಾವುದೇ ಅಂಕಿ-ಸಂಖ್ಯೆಗಳನ್ನು ಒದಗಿಸಿಲ್ಲ. ಅದೇ ವೇಳೆ, ಸುಮಾರು 50 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ಭೀಕರ ಮುಖಾಮುಖಿಯ ಬಗ್ಗೆ ಸರಕಾರಿ ಮಾಧ್ಯಮಗಳು ಮೌನ ತಾಳಿವೆ.
ಎರಡು ದೇಶಗಳ ಸೈನಿಕರ ನಡುವೆ ವಿವಾದಿತ 3,500 ಕಿ.ಮೀ. ಉದ್ದದ ಗಡಿಯಲ್ಲಿ ನಿಯಮಿತವಾಗಿ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆದರೆ, 1975ರ ಬಳಿಕ ನಡೆದ ಇಂಥ ಘರ್ಷಣೆಗಳಲ್ಲಿ ಯಾರೂ ಸತ್ತಿಲ್ಲ.
ಚೀನಾದ ಸರಕಾರ ಪರ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಭಾರತೀಯ ಸೈನಿಕರ ಸಾವಿನ ಸಂಖ್ಯೆಯನ್ನು ವರದಿ ಮಾಡಿದೆ. ಆದರೆ, ಸಾವು-ನೋವುಗಳ ಕುರಿತ ಅಂಕಿ-ಸಂಖ್ಯೆಯನ್ನು ಚೀನಾ ಬಿಡುಗಡೆ ಮಾಡಿಲ್ಲ ಎಂದಿದೆ.
ಅಂಕಿ-ಸಂಖ್ಯೆಗಳನ್ನು ತುಲನೆ ಮಾಡುವುದನ್ನು ನಿವಾರಿಸಲು ಹಾಗೂ ಪ್ರತೀಕಾರದ ಮನೋಭಾವವನ್ನು ತಪ್ಪಿಸಲು ಚೀನಾವು ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ‘ಗ್ಲೋಬಲ್ ಟೈಮ್ಸ್’ ಸಂಪಾದಕೀಯದಲ್ಲಿ ತಿಳಿಸಿದೆ.
‘‘ಭಾರತದೊಂದಿಗಿನ ಗಡಿ ವಿವಾದವನ್ನು ಘರ್ಷಣೆಗೆ ತಿರುಗಿಸಲು ಚೀನಾ ಬಯಸುವುದಿಲ್ಲ’’ ಎಂದು ಸಂಪಾದಕೀಯ ಹೇಳಿದೆ ಹಾಗೂ ಭಾರತದ ‘ಅಹಂಕಾರ ಮತ್ತು ನಿರ್ಲಕ್ಷ್ಯ’ವೇ ಸಂಘರ್ಷಕ್ಕೆ ಕಾರಣ ಎಂದು ದೂರಿದೆ.
ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಕಳವಳ
ಲಡಾಖ್‌ನಲ್ಲಿರುವ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಏರ್ಪಟ್ಟಿರುವ ಭೀಕರ ಸಂಘರ್ಷದ ಬಗ್ಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ‘ಗರಿಷ್ಠ ಸಂಯಮ’ವನ್ನು ಕಾಯ್ದುಕೊಳ್ಳುವಂತೆ ಉಭಯ ದೇಶಗಳನ್ನು ಒತ್ತಾಯಿಸಿದ್ದಾರೆ ಎಂದು ಅವರ ವಕ್ತಾರರು ಮಂಗಳವಾರ ಹೇಳಿದ್ದಾರೆ.
‘‘ಭಾರತ ಮತ್ತು ಚೀನಾಗಳ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸಂಭವಿಸಿರುವ ಹಿಂಸೆ ಮತ್ತು ಸಾವುಗಳಿಗೆ ಸಂಬಂಧಿಸಿದ ವರದಿಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ ಹಾಗೂ ಗರಿಷ್ಠ ಸಂಯಮ ವಹಿಸುವಂತೆ ಉಭಯ ದೇಶಗಳನ್ನು ಒತ್ತಾಯಿಸುತ್ತೇವೆ. ಅದೇ ವೇಳೆ, ಪರಿಸ್ಥಿತಿಯ ತೀವ್ರತೆಯನ್ನು ತಗ್ಗಿಸುವ ಪ್ರಕ್ರಿಯೆಯಲ್ಲಿ ಉಭಯ ದೇಶಗಳು ತೊಡಗಿವೆ ಎಂಬ ವರದಿಗಳು ನಮ್ಮಲ್ಲಿ ಭರವಸೆ ಹುಟ್ಟಿಸಿವೆ’’ ಎಂದು ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯ ಸಹ ವಕ್ತಾರೆ ಎರಿ ಕನೇಕೊ ಹೇಳಿದರು.
ಚೀನಾ ಸೈನಿಕರೊಂದಿಗಿನ ಮುಖಾಮುಖಿಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.