ನಕಲಿ ವಾಟ್ಸ್ಯಾಪ್ ಸಂದೇಶವನ್ನು ನಂಬಿ ‘ಮೃತ 30 ಚೀನಿ ಸೈನಿಕರ' ಹೆಸರುಗಳನ್ನು ಪ್ರಕಟಿಸಿದ ಟೈಮ್ಸ್ ನೌ!

Update: 2020-06-18 13:09 GMT

ಹೊಸದಿಲ್ಲಿ: ಲಡಾಖ್‍ನಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಇತ್ತೀಚೆಗೆ ಭಾರತ-ಚೀನಾ ಸೇನಾಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು ಚೀನಾದ ಕಡೆಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆಂಬ ಕುರಿತು ಸ್ಪಷ್ಟತೆಯಿಲ್ಲ.

ಈ ನಡುವೆ ಟೈಮ್ಸ್ ನೌ ವಾಹಿನಿ ಜೂನ್ 17ರಂದು ಪ್ರಸಾರ ಮಾಡಿದ ಬ್ರೇಕಿಂಗ್ ನ್ಯೂಸ್‍ನಲ್ಲಿ “ಲಡಾಖ್ ಸಂಘರ್ಷದಲ್ಲಿ ತನ್ನ 30 ಸೈನಿಕರು ಹತರಾಗಿರುವ ಕುರಿತು ಚೀನಾ ಒಪ್ಪಿಕೊಂಡಿದೆ'' ಎಂದು ಹೇಳಿತ್ತಲ್ಲದೆ ಚೀನಾದ ಗ್ಲೋಬಲ್ ಟೈಮ್ಸ್ ಸುದ್ದಿ ಆಧಾರದಲ್ಲಿ ಈ ಹೇಳಿಕೆ ನೀಡಲಾಗಿದೆ  ಎಂದೂ ತಿಳಿಸಿತ್ತು. ಈ ಕುರಿತಾದ ಟ್ವೀಟ್ ‍ಗಳನ್ನು ಟೈಮ್ಸ್ ನೌ ಈಗ ತೆಗೆದು ಹಾಕಿದೆ.

ಈ ಸುದ್ದಿಯನ್ನು ಟೈಮ್ಸ್ ನೌ ಆ್ಯಂಕರ್‍ಗಳಾದ ರಾಹುಲ್ ಶಿವಶಂಕರ್ ಹಾಗೂ ನವೀಕ ಕುಮಾರ್ ಅವರು ವಾಚಿಸಿದ್ದು, ಮೃತಪಟ್ಟಿದ್ದಾರೆನ್ನಲಾದ 30 ಚೀನಿ ಸೈನಿಕರ ಹೆಸರುಗಳನ್ನೂ ಓದಿ ಹೇಳಿದ್ದರು. “ಗ್ಲೋಬಲ್ ಟೈಮ್ಸ್ ಹಾಕಿದ ಈ ಪಟ್ಟಿ ಕೂಡ ನಕಲಿ ಫಾರ್ವರ್ಡ್ ಸುದ್ದಿಯಾಗಿರಬಹುದು'' ಎಂದು ಕೊನೆಯಲ್ಲಿ ನವೀಕಾ ಕುಮಾರ್ ಹೇಳಿದ್ದರು.

ಆದರೆ ವಾಸ್ತವವಾಗಿ ನಕಲಿ ಫಾವರ್ಡ್ ಸಂದೇಶವೊಂದನ್ನು ಬಳಸಿ ಟೈಮ್ಸ್ ನೌ ಈ  ಸುದ್ದಿ ಪ್ರಕಟಿಸಿತ್ತು. ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ವ್ಯಾಪಕವಾಗಿ ಹರಡಿದ್ದ ಈ ಸಂದೇಶದಲ್ಲಿ , “ಭಾರತದ ಕಾರ್ಯಾಚರಣೆಯಿಂದಾಗಿ  ಮೃತಪಟ್ಟ 30 ಚೀನಿ ಯೋಧರ ಹೆಸರುಗಳನ್ನು  ಭಾರತದೊಂದಿಗಿನ ಚೀನಾ ಗಡಿಯ ರಕ್ಷಣಾ ವ್ಯವಸ್ಥೆ ನೋಡಿಕೊಳ್ಳುವ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು  ಬಿಡುಗಡೆಗೊಳಿಸಿದ್ದಾರೆ'' ಎಂದು ಹೇಳಲಾಗಿತ್ತು. ಈ ನಕಲಿ ಸಂದೇಶದ ಪಟ್ಟಿಯಲ್ಲಿರುವ ಹೆಸರುಗಳನ್ನು ಟೈಮ್ಸ್ ನೌ ಆ್ಯಂಕರ್‍ಗಳು ಓದಿ ಹೇಳಿದ್ದರು. ಆದರೆ ಅಂತರ್ಜಾಲದಲ್ಲಿ ಹಾಗು ಗ್ಲೋಬಲ್ ಟೈಮ್ಸ್‍ನ ವೆಬ್ ತಾಣ ಹಾಗೂ ಟ್ವಿಟ್ಟರ್ ಪುಟದಲ್ಲಿ ಹುಡುಕಿದಾಗ  ಎಲ್ಲಿಯೂ ಇಂತಹ ಸುದ್ದಿ ದೊರಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News