ರಾಷ್ಟ್ರೀಯ ಭದ್ರತೆ ಕಾನೂನಿನ ಮರುಪರಿಶೀಲನೆಗೆ ಜಿ7 ದೇಶಗಳ ಒತ್ತಾಯಕ್ಕೆ ವಿರೋಧ: ಚೀನಾ
ಬೀಜಿಂಗ್, ಜೂ. 18: ಪ್ರಸ್ತಾಪಿತ ಹಾಂಕಾಂಗ್ ರಾಷ್ಟ್ರೀಯ ಭದ್ರತೆ ಕಾನೂನಿನ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಜಿ7 ಗುಂಪಿನ ದೇಶಗಳ ವಿದೇಶ ಸಚಿವರು ಮಾಡಿರುವ ಒತ್ತಾಯವನ್ನು ತಾನು ದೃಢವಾಗಿ ವಿರೋಧಿಸಿರುವುದಾಗಿ ಚೀನಾ ಗುರುವಾರ ಹೇಳಿದೆ.
ಹಾಂಕಾಂಗ್‌ನಲ್ಲಿ ನಡೆಯುವ ‘‘ಬುಡಮೇಲು ಚಟುವಟಿಕೆಗಳು ಹಾಗೂ ಇತರ ಅಪರಾಧಗಳನ್ನು’’ ಹಾಂಕಾಂಗ್ ರಾಷ್ಟ್ರೀಯ ಭದ್ರತಾ ಕಾನೂನು ನಿಷೇಧಿಸುತ್ತದೆ. ಕಳೆದ ವರ್ಷ ನಗರದಲ್ಲಿ ನಡೆದ ಬೃಹತ್ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳನ್ನು ಹತ್ತಿಕ್ಕಲು ಚೀನಾ ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿದೆ. ಆದರೆ, ನಗರದಲ್ಲಿ ಸ್ಥಿರತೆಯನ್ನು ಮರುಸ್ಥಾಪಿಸಲು ಈ ನೂತನ ಕಾನೂನು ಅಗತ್ಯವಾಗಿದೆ ಎಂದು ಚೀನಾ ಹೇಳುತ್ತದೆ.
ಈ ಕಾನೂನು ಹಾಂಕಾಂಗ್‌ನ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಗೆ ಬಲವಾದ ಹೊಡೆತವಾಗಿರುತ್ತದೆ ಎಂದು ಕಾನೂನಿನ ಟೀಕಾಕಾರರು ಹೇಳುತ್ತಾರೆ. ಹಾಗಾಗಿ, ಪ್ರಸ್ತಾಪಿತ ಕಾನೂನನ್ನು ಮರುಪರಿಶೀಲಿಸುವಂತೆ ಜಿ7 ಗುಂಪಿನ ದೇಶಗಳ ವಿದೇಶ ಸಚಿವರು ಬುಧವಾರ ಚೀನಾವನ್ನು ಒತ್ತಾಯಿಸಿದ್ದರು.
ಆದರೆ, ಅಮೆರಿಕದ ಹವಾಯಿ ರಾಜ್ಯದಲ್ಲಿ ಆ ದೇಶದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಜೊತೆ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ ಚೀನಾದ ಹಿರಿಯ ಸಚಿವ ಯಾಂಗ್ ಜೀಚಿ, ಕಾನೂನನ್ನು ಜಾರಿಗೊಳಿಸಲು ಚೀನಾ ದೃಢ ನಿರ್ಧಾರ ಮಾಡಿದ್ದು ಅದರಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಹೇಳಿದ್ದಾರೆ ಎಂದು ಚೀನಾ ವಿದೇಶ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹಾಕಲಾದ ಹೇಳಿಕೆಯೊಂದು ತಿಳಿಸಿದೆ.
ಜಿ7 ದೇಶಗಳ ಗುಂಪಿನಲ್ಲಿ ಬ್ರಿಟನ್, ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕಗಳಿವೆ.