ವಸಾಹತುಶಾಹಿಯ ಪ್ರತಿಮೆ ತೆರವುಗೊಳಿಸಲು ಆಕ್ಸ್‌ಫರ್ಡ್ ಕಾಲೇಜು ನಿರ್ಧಾರ

Update: 2020-06-18 15:43 GMT

ಲಂಡನ್, ಜೂ. 18: 19ನೇ ಶತಮಾನದ ವಸಾಹತುಶಾಹಿ ಸೆಸಿಲ್ ರೋಡ್ಸ್‌ನ ಪ್ರತಿಮೆಯನ್ನು ತೆರವುಗೊಳಿಸುವುದರ ಪರವಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜೊಂದು ಮತ ಹಾಕಿದೆ.

ಕಾಲೇಜಿನ ಆವರಣದಲ್ಲಿರುವ ಪ್ರತಿಮೆಯನ್ನು ತೆಗೆಯಬೇಕು ಎಂಬುದಾಗಿ ಸಾವಿರಾರು ಪ್ರತಿಭಟನಕಾರರು ಒತ್ತಾಯಿಸಿದ ಬಳಿಕ ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ಓರಿಯಲ್ ಕಾಲೇಜು ಈ ನಿರ್ಧಾರ ತೆಗೆದುಕೊಂಡಿದೆ.

ವಿಕ್ಟೋರಿಯದ ಗಣಿ ಉದ್ಯಮಿ ಸೆಸಿಲ್ ರೋಡ್ಸ್‌ನ ಪ್ರತಿಮೆಗೆ ಸಂಬಂಧಿಸಿದ ಹಲವಾರು ಮಹತ್ವದ ವಿಷಯಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಎಂಬುದಾಗಿಯೂ ತಾನು ಬಯಿಸಿರುವುದಾಗಿ ಕಾಲೇಜು ತಿಳಿಸಿದೆ.

‘‘ಚರ್ಚೆ, ಸಂವಾದ ಹಾಗೂ ಮನನಕ್ಕೆ ಸಾಕಷ್ಟುಟ ಸಮಯಾವಕಾಶ ನೀಡಿದ ಬಳಿಕ ಈ ಎರಡು ನಿರ್ಣಯಗಳಿಗೆ ಬರಲಾಗಿದೆ ಹಾಗೂ ಈ ನಿರ್ಧಾರಗಳು ಬ್ರಿಟನ್ ಮತ್ತು ಜಗತ್ತಿನಾದ್ಯಂತ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆಯೂ ಯೋಚಿಸಲಾಗಿದೆ’’ ಎಂದು ಅದು ಬುಧವಾರ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರೋಡ್ಸ್ ಪ್ರತಿಮೆಯನ್ನು ತೆಗೆಯಬೇಕು ಎಂದು ಒತ್ತಾಯಿಸಿ ಜೂನ್ 9ರಂದು ಬೃಹತ್ ಪ್ರತಿಭಟನೆ ನಡೆದಿತ್ತು. ಈ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸುವ ಅಭಿಯಾನವು ನಾಲ್ಕು ವರ್ಷಗಳ ಹಿಂದೆಯೇ ಆರಂಭಗೊಂಡಿತ್ತು.

ಇತ್ತೀಚೆಗೆ ಅಮೆರಿಕದಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾ ಪೊಲೀಸರ ಕೈಯಲ್ಲಿ ಮೃತಪಟ್ಟ ಬಳಿಕ, ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿಯು ಮತ್ತೊಮ್ಮೆ ದೊಡ್ಡ ಮಟ್ಟದಲಿ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಬ್ರಿಟನ್‌ನಲ್ಲೂ ಬೃಹತ್ ಪ್ರತಿಭಟನೆಗಳಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News