ಅಟ್ಲಾಂಟ: ಕರಿಯ ವ್ಯಕ್ತಿಯನ್ನು ಕೊಂದ ಪೊಲೀಸ್ ಅಧಿಕಾರಿಯ ವಿರುದ್ಧ ಕೊಲೆ ಮೊಕದ್ದಮೆ

Update: 2020-06-18 15:51 GMT

ಅಟ್ಲಾಂಟ (ಅಮೆರಿಕ), ಜೂ. 18: 27 ವರ್ಷದ ಕರಿಯ ವ್ಯಕ್ತಿಯೊಬ್ಬರ ಬೆನ್ನಿಗೆ ಗುಂಡು ಹಾರಿಸಿ ಕೊಂದಿರುವುದಕ್ಕಾಗಿ ಅಟ್ಲಾಂಟದ ಪೊಲೀಸ್ ಅಧಿಕಾರಿಯ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ ಎಂದು ಕಾನೂನು ಇಲಾಖೆಯ ಅಧಿಕಾರಿಗಳು ಬುಧವಾರ ಘೋಷಿಸಿದರು.

ಜಾರ್ಜ್ ಫ್ಲಾಯ್ಡ್ ಎಂಬ ಇನ್ನೊಬ್ಬ ಕರಿಯ ವ್ಯಕ್ತಿಯು ಬಿಳಿಯ ಪೊಲೀಸರ ಕೈಯಲ್ಲಿ ಮೃತಪಟ್ಟಿರುವುದನ್ನು ಪ್ರತಿಭಟಿಸಿ ಜಗತ್ತಿನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಅಟ್ಲಾಂಟ ಪೊಲೀಸರು ರೇಶಾರ್ಡ್ ಬ್ರೂಕ್ಸ್ ಎಂಬ ವ್ಯಕ್ತಿಯನ್ನು ಹತ್ಯೆಗೈದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಬ್ರೂಕ್ಸ್ ಓಡುತ್ತಿರುವಾಗ ಅವರ ಮೇಲೆ ಗುಂಡು ಹಾರಿಸುವುದಕ್ಕೆ ಪೊಲೀಸ್ ಅಧಿಕಾರಿ ಗ್ಯಾರೆಟ್ ರಾಲ್ಫ್‌ಗೆ ಯಾವುದೇ ಸಮರ್ಥನೆಯಿಲ್ಲ ಹಾಗೂ ಕರಿಯ ವ್ಯಕ್ತಿಯು ರಕ್ತ ಸುರಿಸುತ್ತಾ ನೆಲದಲ್ಲಿ ಬಿದ್ದಿದ್ದಾಗ ಅವರಿಗೆ ಒದೆಯುವ ಮೂಲಕ ಪೊಲೀಸ್ ಅಧಿಕಾರಿ ಪರಿಸ್ಥಿತಿಯನ್ನು ವಿಷಮಗೊಳಿಸಿದ್ದಾರೆ ಎಂದು ಅಟ್ಲಾಂಟ ಜಿಲ್ಲಾ ಅಟಾರ್ನಿ ಪೌಲ್ ಹೊವಾರ್ಡ್ ಹೇಳಿದರು.

ಜೂನ್ 12ರಂದು ಸ್ಥಳೀಯ ಫಾಸ್ಟ್‌ಫೂಡ್ ರೆಸ್ಟೋರೆಂಟ್ ಒಂದರ ರಸ್ತೆಯಲ್ಲಿ ಕಾರಿನಲ್ಲಿ ಮಲಗಿದ್ದಾಗ ಬ್ರೂಕ್ಸ್‌ರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ರಾಲ್ಫ್ ಮತ್ತು ಡೆವಿನ್ ಬ್ರಾಸ್ನನ್ ಪೊಲೀಸ್ ಇಲಾಖೆಯ ಹಲವು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News