ಪ್ರಧಾನಿ ಕ್ಷೇತ್ರದಲ್ಲಿ ಲಾಕ್‌ಡೌನ್ ಪರಿಣಾಮದ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ ವಿರುದ್ಧ ಎಫ್‌ಐಆರ್

Update: 2020-06-18 17:37 GMT
ಫೋಟೊ ಕೃಪೆ: twitter.com/sharmasupriya

ಹೊಸದಿಲ್ಲಿ,ಜೂ.18: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕೋವಿಡ್-19 ಲಾಕ್‌ಡೌನ್‌ನ ಪರಿಣಾಮಗಳ ಕುರಿತು ವರದಿ ಮಾಡಿದ್ದಕ್ಕಾಗಿ ‘Scroll.in’ ಸುದ್ದಿ ಜಾಲತಾಣದ ಕಾರ್ಯ ನಿರ್ವಾಹಕ ಸಂಪಾದಕಿ ಸುಪ್ರಿಯಾ ಶರ್ಮಾ ಅವರ ವಿರುದ್ಧ ವಾರಣಾಸಿಯ ರಾಮಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸುದ್ದಿ ಜಾಲತಾಣದ ಮುಖ್ಯ ಸಂಪಾದಕರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

 ವಾರಣಾಸಿ ಜಿಲ್ಲೆಯಲ್ಲಿ ಲಾಕ್‌ಡೌನ್‌ನ ಪರಿಣಾಮಗಳ ಕುರಿತು ಸರಣಿಯ ಭಾಗವಾಗಿ ಶರ್ಮಾ ಜೂ.5ರಂದು ಡೋಮರಿ ಗ್ರಾಮದ ಮಾಲಾ ದೇವಿ ಎಂಬಾಕೆಯನ್ನು ಸಂದರ್ಶಿಸಿದ್ದರು. ಡೋಮರಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಮೋದಿಯವರು ದತ್ತು ಸ್ವೀಕರಿಸಿದ್ದಾರೆ. ತಾನು ಇತರರ ಮನೆಗೆಲಸ ಮಾಡಿಕೊಂಡಿದ್ದು ತನ್ನ ಬಳಿ ಪಡಿತರ ಚೀಟಿ ಇಲ್ಲದ್ದರಿಂದ ಲಾಕ್‌ಡೌನ್ ಅವಧಿಯಲ್ಲಿ ಆಹಾರಕ್ಕಾಗಿ ಒದ್ದಾಡಿದ್ದೆ ಎಂದು ಮಾಲಾ ದೇವಿ ಸಂದರ್ಶನದಲ್ಲಿ ಹೇಳಿದ್ದರು. ‘ಪ್ರಧಾನಿ ಮೋದಿ ದತ್ತು ಪಡೆದಿರುವ ವಾರಣಾಸಿಯ ಗ್ರಾಮದ ಜನರಿಗೆ ಲಾಕ್‌ಡೌನ್‌ನಲ್ಲಿ ಆಹಾರದ ಕೊರತೆಯಿತ್ತು ’ ಎಂಬ ಶೀರ್ಷಿಕೆಯ ವರದಿಯಲ್ಲಿ Scroll.in ಮಾಲಾದೇವಿಯ ಹೇಳಿಕೆಗಳನ್ನು ಯಥಾವತ್ತಾಗಿ ಪ್ರಕಟಿಸಿತ್ತು.

 ಮಾಲಾದೇವಿ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ,ಶರ್ಮಾ ತನ್ನ ಹೇಳಿಕೆಗಳು ಮತ್ತು ಗುರುತನ್ನು ತಿರುಚಿದ್ದಾರೆ. ತಾನು ಮನೆಗೆಲಸದಾಳಲ್ಲ, ಗುತ್ತಿಗೆ ಆಧಾರದಲ್ಲಿ ವಾರಣಾಸಿ ನಗರಸಭೆಯಲ್ಲಿ ಸ್ವಚ್ಛತಾ ಉದ್ಯೋಗಿಯಾಗಿದ್ದೇನೆ. ಲಾಕ್‌ಡೌನ್ ಅವಧಿಯಲ್ಲಿ ತಾನಾಗಲೀ ತನ್ನ ಕುಟುಂಬ ಸದಸ್ಯರಾಗಲೀ ಯಾವುದೇ ಸಮಸ್ಯೆ ಎದುರಿಸಿರಲಿಲ್ಲ. ತಾನು ಮತ್ತು ತನ್ನ ಮಕ್ಕಳು ಉಪವಾಸವಿದ್ದರೆಂದು ಹೇಳುವ ಮೂಲಕ ಸುಪ್ರಿಯಾ ಶರ್ಮಾ ತನ್ನ ಬಡತನ ಮತ್ತು ಜಾತಿಯನ್ನು ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ Scroll.in , “2020ರ ಜೂನ್ 5ರಂದು ಉತ್ತರ ಪ್ರದೇಶದ ವಾರಣಾಸಿಯ ಡೋಮರಿ ಗ್ರಾಮದಲ್ಲಿ Scroll.in  ಮಾಲಾ ಅವರ ಸಂದರ್ಶನ ನಡೆಸಿತ್ತು. ‘ಪ್ರಧಾನಿ ಮೋದಿ ದತ್ತು ಪಡೆದಿರುವ ವಾರಣಾಸಿಯ ಗ್ರಾಮದ ಜನರಿಗೆ ಲಾಕ್‌ಡೌನ್‌ನಲ್ಲಿ ಆಹಾರದ ಕೊರತೆಯಿತ್ತು ’ ಎಂಬ ಶೀರ್ಷಿಕೆಯ ವರದಿಯಲ್ಲಿ ಆಕೆಯ ಹೇಳಿಕೆಯನ್ನು ನಿಖರವಾಗಿ ವರದಿ ಮಾಡಲಾಗಿದೆ. Scroll.in  ಪ್ರಧಾನ ಮಂತ್ರಿಯವರ ಕ್ಷೇತ್ರದ ಕುರಿತಾದ ತನ್ನ ವರದಿಗೆ ಬದ್ಧವಾಗಿದೆ. ಈ ಎಫ್ ಐಆರ್ ಸ್ವತಂತ್ರ ಪತ್ರಿಕೋದ್ಯಮವನ್ನು ಬೆದರಿಸುವ ಮತ್ತು ಮೌನವಾಗಿಸುವ ಪ್ರಯತ್ನವಾಗಿದೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News