ರಾಜ್ಯಸಭೆ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆ 2 ಸೀಟು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ 2 ಸೀಟುಗಳಲ್ಲಿ ಜಯ

Update: 2020-06-19 17:35 GMT

ಹೊಸದಿಲ್ಲಿ,ಜೂ.19: ರಾಜ್ಯಸಭೆಗೆ ಶುಕ್ರವಾರ ನಡೆದ ದ್ವೈವಾರ್ಷಿಕ ಚುನಾವಣೆಗಳಲ್ಲಿ ರಾಜಸ್ಥಾನದಿಂದ ಮೂರು ಸ್ಥಾನಗಳ ಪೈಕಿ ಎರಡನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದರೆ,ಒಂದು ಸ್ಥಾನವು ಬಿಜೆಪಿ ಪಾಲಾಗಿದೆ. ಮಧ್ಯಪ್ರದೇಶದಲ್ಲಿ ಫಲಿತಾಂಶ ತಿರುವು ಮುರುವು ಆಗಿದ್ದು,ಆಡಳಿತ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ.

ಭಾರೀ ಕುತೂಹಲ ಮೂಡಿಸಿರುವ ಗುಜರಾತಿನಲ್ಲಿಯ ಚುನಾವಣಾ ಫಲಿತಾಂಶಗಳು ತಡರಾತ್ರಿಯವರೆಗೂ ಪ್ರಕಟವಾಗಿಲ್ಲ. 10 ರಾಜ್ಯಗಳಿಂದ ರಾಜ್ಯಸಭೆಯ 24 ಸ್ಥಾನಗಳಿಗಾಗಿ ನಡೆದ ದ್ವೈವಾರ್ಷಿಕ ಚುನಾವಣೆ ರೆಸಾರ್ಟ್ ರಾಜಕೀಯ, ರಾಜೀನಾಮೆಗಳು, ಪಕ್ಷಾಂತರ ಮತ್ತು ಲಂಚದ ಆರೋಪಗಳಿಗೆ ಸಾಕ್ಷಿಯಾಗಿತ್ತು.

ಲಭ್ಯ ಫಲಿತಾಂಶಗಳಂತೆ ರಾಜಸ್ಥಾನದಲ್ಲಿ ಆಡಳಿತ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ ಮತ್ತು ನೀರಜ ಡಾಂಗಿ ಹಾಗೂ ಬಿಜೆಪಿಯ ರಾಜೇಂದ್ರ ಗೆಹ್ಲೋಟ್ ಆಯ್ಕೆಯಾಗಿದ್ದಾರೆ. ಇಲ್ಲಿ ಯಾವುದೇ ಅಡ್ಡ ಮತದಾನ ನಡೆದಿಲ್ಲ. ಬಿಜೆಪಿಯು ಓಂಕಾರ ಸಿಂಗ್ ಲಖಾವತ್ ಅವರನ್ನು ತನ್ನ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತಾದರೂ ಅವರು ಪರಾಭವಗೊಂಡಿದ್ದಾರೆ. ಇದರೊಂದಿಗೆ ರಾಜ್ಯಸಭೆಯಲ್ಲಿ ರಾಜಸ್ಥಾನದಿಂದ ಒಟ್ಟು 10 ಸ್ಥಾನಗಳ ಪೈಕಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಮೂರಕ್ಕೇರಿದೆ. ಇತರ ಏಳು ಸದಸ್ಯರು ಬಿಜೆಪಿಯವರಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಸುಮೇರ್ ಸಿಂಗ್ ಹಾಗೂ ಕಾಂಗ್ರೆಸ್‌ನಿಂದ ದಿಗ್ವಿಜಯ ಸಿಂಗ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇನ್ನೋರ್ವ ಅಭ್ಯರ್ಥಿ, ದಲಿತ ನಾಯಕ ಫೂಲಸಿಂಗ್ ಬಾರಿಯಾ ಸೋತಿದ್ದಾರೆ. ಬಿಜೆಪಿಗೆ ಮತ ಚಲಾಯಿಸಿದ್ದಕ್ಕಾಗಿ ಎಸ್‌ಪಿ ಶಾಸಕ ರಾಜೇಶ ಶುಕ್ಲಾರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಆಡಳಿತ ವೈಎಸ್‌ಆರ್ ಕಾಂಗ್ರೆಸ್ ನಿರೀಕ್ಷೆಯಂತೆ ಎಲ್ಲ ನಾಲ್ಕೂ ಸ್ಥಾನಗಳನ್ನು ಗೆದ್ದುಕೊಂಡಿದೆ. ಉಪ ಮುಖ್ಯಮಂತ್ರಿ ಪಿಲ್ಲಿ ಸುಭಾಷಚಂದ್ರ ಬೋಸ್, ಸಚಿವ ಎಂ.ವೆಂಕಟರೆಡ್ಡಿ,ಕೈಗಾರಿಕೋದ್ಯಮಿ ಪರಿಮಳ ನಾಥ್ವಾನಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಅಯೋಧ್ಯಾ ರಾಮಿ ರೆಡ್ಡಿ ಅವರು ತಲಾ 38 ಮತಗಳಿಂದ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷ ಟಿಡಿಪಿ ಹೀನಾಯ ಸೋಲನ್ನು ಕಂಡಿದೆ.

 ವಿವಿಧ ಕಾರಣಗಳಿಂದ ಬಿಜೆಪಿ ಶಾಸಕ ಕೇಸರಿ ಸಿನ್ಹ ಸೋಲಂಕಿ ಮತ್ತು ಸಚಿವ ಭೂಪೇಂದ್ರಸಿನ್ಹ ಚೂಡಾಸಮ ಅವರ ಮತಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದ್ದರಿಂದ ಗುಜರಾತನಲ್ಲಿಯ ನಾಲ್ಕು ಸ್ಥಾನಗಳಿಗೆ ಮತಎಣಿಕೆ ವಿಳಂಬಗೊಂಡಿದೆ.

ಮೇಘಾಲಯದಲ್ಲಿ ರಾಜ್ಯಸಭೆಗೆ ಏಕೈಕ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್‌ನ ಡಾ.ಡಬ್ಲು.ಆರ್.ಖರ್ಲುಖಿ ಅವರು ಕಾಂಗ್ರೆಸ್ ಅಭ್ಯರ್ಥಿ ಕೆನೆಡಿ ಖಿರಿಯೆಂ ಅವರನ್ನು ಪರಾಭವಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News