×
Ad

ಅಮೆರಿಕ: ಲಕ್ಷಾಂತರ ಅಕ್ರಮ ವಲಸಿಗರ ಗಡಿಪಾರು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

Update: 2020-06-19 20:46 IST

ವಾಶಿಂಗ್ಟನ್, ಜೂ. 19: ಮಕ್ಕಳಿದ್ದಾಗ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಲಕ್ಷಾಂತರ ವಲಸಿಗರನ್ನು ಗಡಿಪಾರಿನಿಂದ ರಕ್ಷಿಸುವ ಕಾನೂನನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಯತ್ನಗಳಿಗೆ ದೇಶದ ಸುಪ್ರೀಂ ಕೋರ್ಟ್ ಗುರುವಾರ ತಡೆಯೊಡ್ಡಿದೆ. ಅಧ್ಯಕ್ಷೀಯ ಚುನಾವಣೆ ಸಮೀಪಕ್ಕೆ ಬರುತ್ತಿರುವಂತೆಯೇ ಟ್ರಂಪ್‌ಗೆ ಎದುರಾದ ಮಹತ್ವದ ಹಿನ್ನಡೆ ಇದಾಗಿದೆ.

ಅಮೆರಿಕದ ಸುಪ್ರೀಂ ಕೋರ್ಟ್ 5-4ರ ಬಹುಮತದ ತೀರ್ಪಿನ ಮೂಲಕ ಕೆಳ ನ್ಯಾಯಾಲಯವೊಂದರ ತೀರ್ಪನ್ನು ಎತ್ತಿಹಿಡಿದಿದೆ.

ವಲಸಿಗರಿಗೆ ರಕ್ಷಣೆ ನೀಡುವ ಡೆಫರ್ಡ್ ಆ್ಯಕ್ಷನ್ ಫಾರ್ ಚೈಲ್ಡ್‌ಹುಡ್ ಅರೈವಲ್ಸ್ (ಡಿಎಸಿಎ) ಕಾನೂನನ್ನು ರದ್ದುಪಡಿಸುವ ಸರಕಾರಿ ಆದೇಶವೊಂದಕ್ಕೆ ಟ್ರಂಪ್ 2017ರಲ್ಲಿ ಸಹಿ ಹಾಕಿದ್ದರು. ಆದರೆ ಈ ಸರಕಾರಿ ಆದೇಶವು ಕಾನೂನುಬಾಹಿರ ಎಂಬುದಾಗಿ ಕೆಳ ನ್ಯಾಯಾಲಯವು ತೀರ್ಪು ನೀಡಿತ್ತು. ವಲಸಿಗರನ್ನು ರಕ್ಷಿಸುವ ಈ ಕಾನೂನನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ರೂಪಿಸಿದ್ದರು.

ಟ್ರಂಪ್ ಸರಕಾರದ ಆದೇಶವು ‘ಅಡ್ಮಿನಿಸ್ಟ್ರೇಟಿವ್ ಪ್ರೊಸೀಜರ್ ಆ್ಯಕ್ಟ್’ ಎಂಬ ಫೆಡರಲ್ ಕಾನೂನೊಂದರ ಪ್ರಕಾರ ಸ್ವೇಚ್ಛಾಚಾರದಿಂದ ಕೂಡಿದೆ ಎಂಬ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಬಂದಿದೆ. ಈ ತೀರ್ಪಿನ ಪರವಾಗಿ ನಾಲ್ವರು ಲಿಬರಲ್ ನ್ಯಾಯಾಧೀಶರ ಜೊತೆಗೆ ಕನ್ಸರ್ವೇಟಿವ್ ಮುಖ್ಯ ನ್ಯಾಯಾಧೀಶರು ಮತ ಹಾಕಿದರು.

ಈ ಆದೇಶದ ಫಲಶ್ರುತಿಯಾಗಿ ಡಿಎಸಿಎ ಕಾರ್ಯಕ್ರಮದಡಿಯಲ್ಲಿ ನೋಂದಾಯಿಸಿಕೊಂಡಿರುವ ಸುಮಾರು 6.49,000 ವಲಸಿಗರು ಗಡಿಪಾರಿನಿಂದ ರಕ್ಷಣೆ ಪಡೆಯುತ್ತಾರೆ ಹಾಗೂ ನವೀಕರಿಸಬಹುದಾದ ಎರಡು ವರ್ಷಗಳ ಉದ್ಯೋಗ ಪರ್ಮಿಟ್‌ಗಳನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಈ ಪೈಕಿ ಹೆಚ್ಚಿನವರು ಮೆಕ್ಸಿಕೊ ಮತ್ತು ಇತರ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಜನಿಸಿದ ಹಿಸ್ಪಾನಿಕ್ ಜನಾಂಗೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News